ಬಳ್ಳಾರಿ, ಅ.30 (DaijiworldNews/TA): ಮಾಜಿ ಸಚಿವ ಶ್ರೀರಾಮುಲು ಅವರ ಸೋದರಳಿಯ ಹಾಗೂ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು ಅವರಿಗೆ ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯದಿಂದ ನಾನ್ಬೇಲೇಬಲ್ ವಾರಂಟ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸುರೇಶ್ ಬಾಬು ಅವರನ್ನು ಬಂಧಿಸಲು ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದೆ ಎಂದು ತಿಳಿದುಬಂದಿದೆ.

ಸುರೇಶ್ ಬಾಬು ಬಂಧನಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರ ತಂಡ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರ ಸಹಕಾರ ಕೋರಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯವು ಸುರೇಶ್ ಬಾಬು ವಿರುದ್ಧ ನಾನ್ಬೇಲೇಬಲ್ ವಾರಂಟ್ ಹೊರಡಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿಯಾಗಿದೆ ಮತ್ತು ಬಂಧನಕ್ಕೆ ನ್ಯಾಯಾಲಯ ನೀಡಿರುವ ನಿರ್ದೇಶನಗಳೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಬಿಹಾರ ಪೊಲೀಸರ ಬಳ್ಳಾರಿ ಭೇಟಿ ಹಾಗೂ ಸ್ಥಳೀಯ ಪೊಲೀಸರ ಸಹಕಾರ ಕೋರಿರುವ ಬೆಳವಣಿಗೆ ಇದೀಗ ಗಮನ ಸೆಳೆದಿದೆ. ಪ್ರಕರಣದ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿದೆ.