ಗುವಾಹಟಿ, ಅ.30 (DaijiworldNews/AA): ಭೂತಾನ್ನ ಎತ್ತರದ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಸರೋವರವೊಂದು ಹಠಾತ್ ಸ್ಫೋಟಗೊಂಡು ಭಾರೀ ಪ್ರಮಾಣದ ನೀರು ಮತ್ತು ಅವಶೇಷಗಳು ನದಿಗಳಿಗೆ ನುಗ್ಗಿದೆ. ಪರಿಣಾಮ ಭಾರತದ ಗಡಿ ಭಾಗದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಗ್ಗು ಪ್ರದೇಶದ ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಭೂತಾನ್ನ ಗಾಸಾ ಪ್ರಾಂತ್ಯದ ಮೋಚು ಉಪ-ಕಣಿವೆಯಲ್ಲಿರುವ 'ಸಿಂತಾಫು' ಸರೋವರದಲ್ಲಿ ಈ ಜಲಸ್ಫೋಟವಾಗಿದೆ. ತಾಪಮಾನ ಏರಿಕೆ ಮತ್ತು ಮಂಜುಗಡ್ಡೆಯ ನೈಸರ್ಗಿಕ ತಡೆಗೋಡೆಗಳಲ್ಲಿ ಉಂಟಾದ ಅಸ್ಥಿರತೆಯೇ ಸರೋವರ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗಿದೆ.
ಪ್ರವಾಹದ ನೀರು ಭೂತಾನ್ನಿಂದ ಭಾರತದತ್ತ ಹರಿಯುವ ನದಿಗಳನ್ನು ಸೇರುತ್ತಿರುವುದರಿಂದ ಮೂಲಸೌಕರ್ಯ, ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳಿಗೆ ಭಾರೀ ಹಾನಿಯಾಗುವ ಸಾಧ್ಯತೆಯಿದೆ. ನದಿ ತೀರದ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಸ್ಥಳಾಂತರಕ್ಕೆ ಸಿದ್ಧರಾಗಿರುವಂತೆ ಜಿಲ್ಲಾಡಳಿತಗಳು ಘೋಷಿಸಿದೆ.
ಅಸ್ಸಾಂ ರಾಜ್ಯದ ಕೊಕ್ರಝಾರ್, ಬಕ್ಸಾ, ಚಿರಾಂಗ್ ಮತ್ತು ಧುಬ್ರಿ ಪಶ್ಚಿಮ ಬಂಗಾಳ ಜಲ್ಪೈಗುರಿ ಮತ್ತು ಅಲಿಪುರ್ದುವಾರ್ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಹಾಗೂ ಸ್ಥಳೀಯ ಆಡಳಿತಗಳು ಹಗಲಿರುಳು ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದು, ನದಿಗಳಲ್ಲಿನ ನೀರಿನ ಹರಿವು ಮತ್ತು ತೀರದ ಸವೆತದ ಮೇಲೆ ತೀವ್ರ ನಿಗಾ ವಹಿಸಿದೆ.