ಬೆಂಗಳೂರು, ಅ.29 (DaijiworldNews/AK): ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ಸಿಕ್ಕಿದೆ. ತನಿಖೆ ಪೂರ್ಣಗೊಳಿಸಿ ಸಿಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟಿಂಗ್ ಆಪರೇಷನ್ನಲ್ಲಿ ಬರುವ ವಿಚಾರ ಕಟ್ಟುಕಥೆ. ಪ್ರಕರಣದ ಕುರಿತು ಸಿಸಿಬಿ ಪೊಲೀಸರಿಂದ ಸಮಗ್ರ ತನಿಖೆ ಕೈಗೊಳ್ಳಲಾಗಿದೆ. ವೀಡಿಯೊದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪ ಕಟ್ಟುಕಥೆ ಎಂದು ಸಿಸಿಬಿ ಸ್ಪಷ್ಟಪಡಿಸಿದೆ.
ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಮತ್ತು ದಾಖಲಿಸಲಾದ ಹೇಳಿಕೆ ಆಧಾರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸ್ಟಿಂಗ್ ಪ್ರಕರಣ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿರೋದು ಮೇಲ್ನೋಟಕ್ಕೆ ಕಂಡುಬಂದಿದೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದೆ.
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನ ವಿಚಾರಣೆ ಮಾಡಲಾಗಿದೆ. ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆ & ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪ ಸುಳ್ಳು ಅಂತ ಮೇಲ್ನೋಟಕ್ಕೆ ಕಂಡುಬಂದಿದೆ. ವೀಡಿಯೊ ಚಿತ್ರೀಕರಿಸಲು ಬಳಸಲಾಗಿದ್ದ ಮೂಲ ಮೊಬೈಲ್ ಜಪ್ತಿ ಮಾಡಲಾಗಿದೆ. ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ವರದಿ ಬರಬೇಕಾಗಿದೆ.
ಸ್ಟಿಂಗ್ ಕೇಸಲ್ಲಿ ಪ್ರಭಾವಿ ರಾಜಕೀಯ ಸಂಪರ್ಕಗಳನ್ನ ಹೊಂದಿರುವ ಕೆಲ ವ್ಯಕ್ತಿಗಳೊಂದಿಗೆ ಸಂಬಂಧ ಇರುವುದು ಕಂಡುಬಂದಿದೆ. ಯಾರ ಹೆಸರು ಉಲ್ಲೇಖಿಸದೇ ಪ್ರಭಾವಿ ರಾಜಕೀಯ ಸಂಪರ್ಕ ಎಂದು ಸಿಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಎನ್ನಲಾಗಿದೆ. ವೀಡಿಯೊ ಸುಮಾರು 12 ವರ್ಷಗಳ ನಂತರ, ಅಂದರೆ 2023ರಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋವನ್ನು ಯಾವ ಸಂದರ್ಭಗಳಲ್ಲಿ ಹಾಗೂ ಯಾವ ಉದ್ದೇಶದಿಂದ ಚಿತ್ರೀಕರಿಸಲಾಯಿತು? ಅದರ ಸೃಷ್ಟಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಯಾರು, ಅವರ ಪಾತ್ರವೇನು? ಅದರ ಹಿಂದಿನ ಸಂಭವನೀಯ ಉದ್ದೇಶಗಳೇನು ಎಂಬ ಅಂಶಗಳ ಕುರಿತು ಕೂಲಂಕಷ ತನಿಖೆ ನಡೆಯಬೇಕಿದೆ.