ಬೆಂಗಳೂರು, ಅ.29 (DaijiworldNews/AK): ಬರ ಪರಿಹಾರ ನೀಡುವುದಾಗಿ ವಿಶೇಷ ಅಧಿವೇಶನದಲ್ಲಿ ಇತ್ತೀಚೆಗೆ ಸರ್ಕಾರ ಘೋಷಿಸಿತ್ತು. ಆ ಮೂಲಕ ಮಳೆಯಿಲ್ಲದೆ ಬರದಿಂದ ಕಂಗೆಟ್ಟಿರುವ ಅನ್ನದಾತರ ನೆರವಿಗೆ ಸರ್ಕಾರ ಮುಂದಾಗಿತ್ತು. ಅದರಂತೆ ಬರ ಪೀಡಿತ ತಾಲೂಕುಗಳ ರೈತರಿಗೆ 2,500 ರೂ ಪರಿಹಾರ ಕೊಡಲು ನಿರ್ಧರಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತರು ಸೇರಿದಂತೆ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಣಕ್ಕೆ ಏನೂ ಬರಲ್ಲ, 25000 ರೂ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ವಿರೋಧದ ಮಧ್ಯೆ ಇದೀಗ ಸರ್ಕಾರ ರೈತರಿಗೆ 2500 ರೂ. ಬರ ಪರಿಹಾರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಕರ್ನಾಟಕದ ಒಟ್ಟು 240 ತಾಲ್ಲೂಕುಗಳ ಪೈಕಿ 226 ತಾಲ್ಲೂಕು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅನುದಾನ ಬಿಡುಗಡೆಯಾಗುವವರೆಗೆ ಕಾಯದೆ, ರಾಜ್ಯ ಸರ್ಕಾರವು ತನ್ನದೇ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡಿದೆ. ಮೊದಲನೇ ಕಂತಾಗಿ ಪ್ರತಿ ರೈತನಿಗೆ 2,500 ರೂ ಪರಿಹಾರ ನೀಡಲು ಸರ್ಕಾರ ಮಂಜೂರಾತಿ ನೀಡಿದೆ.
ರೈತರು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಇನ್ನು 2500 ರೂ. ಬರ ಪರಿಹಾರ ಪಡೆಯಲು ರೈತರು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ. ಇ-ಆಡಳಿತದ ಫ್ರೂಟ್ಸ್ (ರೈತರ ನೋಂದಣಿ ಮತ್ತು ಏಕೀಕರತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶ ಹಾಗೂ ಮುಂಗಾರು ಬೆಳೆ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ನೇರವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಅತೀ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಂದ ಹಿಡಿದು ದೊಡ್ಡ ರೈತರವರೆಗೆ ಆರೋಹಣ ಕ್ರಮದಲ್ಲಿ ಹಣ ಪಾವತಿ ಮಾಡಲಗುತ್ತದೆ. ಮೊದಲು ಮಳೆಯಾಶ್ರಿತ ಬೆಳೆ, ನಂತರ ನೀರಾವರಿ ಮತ್ತು ಕೊನೆಯದಾಗಿ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ನೀಡಲಾಗುತ್ತದೆ. ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ಗೆ ಮಾತ್ರ ಈ ಪರಿಹಾರ ಸೀಮಿತವಾಗಿದೆ.