ನವದೆಹಲಿ, ಅ.29 (DaijiworldNews/TA): ಸುಪ್ರೀಂ ಕೋರ್ಟ್ ತರಾಟೆಗೆ ಬೆನ್ನಲ್ಲೇ ಭಾರತೀಯ ಔಷಧ ಬೆಲೆ ನಿಯಂತ್ರಣ ಸಂಸ್ಥೆಯು ಇದೀಗ 543 ಕ್ಯಾನ್ಸರ್ ಔಷಧಗಳ ಮಾರಾಟ ದರವನ್ನು ಪರಿಷ್ಕರಿಸಿದೆ. ಇದರ ಪರಿಣಾಮವಾಗಿ ಕೆಲವು ಜೆನೆರಿಕ್ ಮತ್ತು ಬಯೋಸಿಮಿಲರ್ ಔಷಧಗಳ ದರಗಳು ಶೇ.70 ರಷ್ಟು ಕಡಿಮೆಯಾಗಿದೆ. ಈ ಹೊಸ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿವೆ.

ಜೀವ ಉಳಿಸುವ ಕ್ಯಾನ್ಸರ್ ಔಷಧಗಳನ್ನು ಕೈಗೆಟುಕುವ ಬೆಲೆಗೆ ಒದಗಿಸುವ ಉದ್ದೇಶದಿಂದ ಔಷಧಗಳ ಪೂರೈಕೆ ಸರಪಳಿಯಲ್ಲಿನ ವ್ಯಾಪಾರ ಮಾರ್ಜಿನ್ಗಳನ್ನು ತರ್ಕಬದ್ಧಗೊಳಿಸುವ Trade Margin Rationalisation ಕ್ರಮದ ಭಾಗವಾಗಿ ಈ ಬೆಲೆ ಪರಿಷ್ಕರಣೆ ಮಾಡಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಬಿಡುಗಡೆ ಮಾಡಿರುವ ಪರಿಷ್ಕೃತ ದರಗಳ ಪಟ್ಟಿಯಲ್ಲಿ, ಅಕ್ಟೋಬರ್ 27ರವರೆಗೆ ಔಷಧ ತಯಾರಿಕಾ ಕಂಪನಿಗಳು ಸಲ್ಲಿಸಿದ ಮಾಹಿತಿಯನ್ನು ಪರಿಗಣಿಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ ಪ್ರಕಟಣೆ ತಿಳಿಸಿದೆ.
ನಿಗದಿತ ಪಟ್ಟಿಗೆ ಸೇರದ ಕ್ಯಾನ್ಸರ್ ಔಷಧಗಳ ಪರಿಷ್ಕೃತ ಬೆಲೆಗಳನ್ನು ತಯಾರಕರು ಸಲ್ಲಿಸಿದಂತೆ ಈ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ನಿಗದಿತ ಬೆಲೆ ಪಟ್ಟಿಗೆ ಸೇರದ ಕ್ಯಾನ್ಸರ್ ಔಷಧಗಳ ಹೊಸ ದರಗಳನ್ನು ತಯಾರಕರು ಸಲ್ಲಿಸಿದಂತೆ ಪಟ್ಟಿಯನ್ನು ನಿರಂತರವಾಗಿ ನವೀಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಅಕ್ಟೋಬರ್ 17ರಂದು NPPA, ನಿಗದಿತ ಪಟ್ಟಿಗೆ ಸೇರದ 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಮಾರ್ಜಿನ್ಗಳನ್ನು ತರ್ಕಬದ್ಧಗೊಳಿಸುವ ಕ್ರಮವನ್ನು ಪ್ರಕಟಿಸಿತ್ತು. ಔಷಧಗಳ ಮಾರಾಟ ಸರಪಳಿಯಲ್ಲಿನ ಅತಿಯಾದ ವ್ಯಾಪಾರ ಲಾಭಾಂಶಕ್ಕೆ ಕಡಿವಾಣ ಹಾಕುವುದು, ರೋಗಿಗಳ ಚಿಕಿತ್ಸಾ ವೆಚ್ಚವನ್ನು ತಗ್ಗಿಸುವುದು ಮತ್ತು ಅಗತ್ಯ ಕ್ಯಾನ್ಸರ್ ಔಷಧಗಳ ಲಭ್ಯತೆಯನ್ನು ಸುಧಾರಿಸುವುದು ಈ ಕ್ರಮದ ಉದ್ದೇಶವಾಗಿದೆ.