ಬೆಂಗಳೂರು, ಅ.27 (DaijiworldNews/AK): ರಾಜ್ಯ ಸರಕಾರವು ಬೊಗಳೆ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರಕಾರವು ಯಾವುದೇ ಹೊಸ ಯೋಜನೆ ಘೋಷಿಸಲು ಅವಕಾಶ ಇಲ್ಲ ಎಂದು ಹಣಕಾಸು ಇಲಾಖೆಯು ಸರಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದೆ. ಬರಗಾಲ ಪರಿಹಾರಧನವಾಗಿ ರೈತರಿಗೆ 2500 ರೂ. ಸರಕಾರ ಘೋಷಿಸಿದ್ದರೂ ಇವತ್ತಿನತನಕ ಯಾವುದೇ ರೈತರ ಖಾತೆಗೆ ಹಣ ವರ್ಗಾಯಿಸಿಲ್ಲ ಎಂದು ಆಕ್ಷೇಪಿಸಿದರು.
ಹಣ ಸಂದಾಯ ಆಗದೇ ಇರುವುದರ ಬಗ್ಗೆ ಸ್ವತಃ ಕಂದಾಯ ಸಚಿವರೇ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ದಿವಾಳಿಯಾಗಿದೆ ಅನ್ನೋದನ್ನ ಪರೋಕ್ಷವಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ನುಡಿದರು. ಮುಖ್ಯಮಂತ್ರಿಗಳು ಕಬ್ಬಿನ ಬೆಳೆಗಾರರಿಗೆ ಸಂಬಂಧಪಟ್ಟಂತೆ ನಿನ್ನೆ ಸಭೆ ಮಾಡಿದ್ದರು. ಸರಕಾರದಲ್ಲಿ ಹಣ ಎಲ್ಲಿದೆ, ನನ್ನ ಜೇಬಿನಿಂದ ಹೇಗೆ ಕೊಡಲು ಸಾಧ್ಯ ಎಂದು ಅಸಹಾಯಕತೆಯನ್ನು ವ್ಯಕ್ತ ಮಾಡಿದ್ದರು ಎಂದು ಗಮನ ಸೆಳೆದರು.
ಮಳೆ ಕಡಿಮೆ ಆಗುತ್ತದೆ ಎಂಬ ಸೂಚನೆ ಸಿಕ್ಕಿದಾಗ, ರೈತರಿಗೆ ವಿಶ್ವಾಸವನ್ನು ತುಂಬಬೇಕಾದಂತಹ ಮುಖ್ಯಮಂತ್ರಿಗಳು ಯಾವುದೇ ಬೆಳೆಗಳನ್ನು ಬೆಳೆಯಬೇಡಿ ಅಂತ ಹೇಳಿದ್ದರು. ಇವತ್ತು ಕಬ್ಬು ಬೆಳೆಗಾರರ ವಿಷಯ ಬಂದಾಗ, ಮತ್ತೆ ವಿಶ್ವಾಸವನ್ನು ತುಂಬಬೇಕಾದಂತಹ ಸರಕಾರವು, ಹಣ ಇಲ್ಲ ಎಂಬುದಾಗಿ ಸ್ಪಷ್ಟ ಮಾಡಿದ್ದಾರೆ ಎಂದು ವಿವರಿಸಿದರು.
ಒಟ್ಟಾರೆ ಈ ಸರ್ಕಾರ ಒಂದು ಜೀರೋ ಬ್ಯಾಲೆನ್ಸ್ ಸರಕಾರ; ಇದು ದಿವಾಳಿ ಸರಕಾರ. ಯಾವ ವರ್ಗಕ್ಕೂ ಕೂಡ ನ್ಯಾಯವನ್ನು ಕೊಡದೇ ಇರುವ ಅಸಹಾಯಕತೆಗೆ ಈ ಸರಕಾರ ಇವತ್ತು ಮುಟ್ಟಿದೆ ಎಂದು ಟೀಕಿಸಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಆಡಳಿತ ಇದೆ ಅಂತ ಅನ್ನಿಸುತ್ತಿಲ್ಲ. ಯಾವ ಸಚಿವರೂ ಆಡಳಿತದ ಪ್ರಕ್ರಿಯೆ ಬಗ್ಗೆ ಗಮನವನ್ನು ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಯಿಂದ ಹಿಡಿದು ಕಾಂಗ್ರೆಸ್ಸಿನ ಶಾಸಕರು, ಕಾರ್ಯಕರ್ತರ ತನಕ ಸ್ಟಿಂಗ್ ಆಪರೇಷನ್ನಲ್ಲೇ ತೊಡಗಿದ್ದಾರೆ ಎಂದು ಆರೋಪಿಸಿದರು. ಬರಗಾಲ ತೀವ್ರವಾಗಿದೆ. ಬರಗಾಲದ ಸಭೆಗಳನ್ನು ನಡೆಸಿಲ್ಲ. ಕೇವಲ ಐಎಎಸ್ ಅಧಿಕಾರಿಗಳಷ್ಟೇ ಅಧಿಕಾರ ನಡೆಸುತ್ತಿದ್ದಾರೆ. ಶಾಸಕಾಂಗವು ಆಡಳಿತ ನಡೆಸುತ್ತಿಲ್ಲ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ. ಸರಕಾರದಲ್ಲಿ ಬಜೆಟ್ನಲ್ಲಿ ಘೋಷಣೆಯಾದಂತಹ ಯಾವ ಯೋಜನೆಗಳ ಸರಕಾರಿ ಆದೇಶ ಹೊರಡಿಸಿಲ್ಲ. ಇಂತಹ ಒಂದು ಅಸಹಾಯಕತೆಯ ಶೂನ್ಯ ಆವರಿಸಿರುವಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಯಾವತ್ತೂ ಕೂಡ ಬಂದಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.