ಅಹಮದಾಬಾದ್, ಅ.27 (DaijiworldNews/AA): ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಹೊರಡಿಸಿರುವ ಮಹತ್ವದ ಆದೇಶದ ಮೇರೆಗೆ, ಪ್ರಮುಖ ಔಷಧ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತನ್ನ ಪ್ರಮುಖ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಶೇ.70ರವರೆಗೂ ಗಣನೀಯವಾಗಿ ಇಳಿಕೆ ಮಾಡಿದೆ.

ಈ ಪರಿಷ್ಕೃತ ನೂತನ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿವೆ. ಈ ನಿಯಮ ಪಾಲನೆಯ ಭಾಗವಾಗಿ ಟೊರೆಂಟ್ ಫಾರ್ಮಾ ತನ್ನ ಉತ್ಪಾದನೆಯ ಜೀವರಕ್ಷಕ ಕ್ಯಾನ್ಸರ್ ಇಂಜೆಕ್ಷನ್ಗಳು, ಮಾತ್ರೆಗಳು ಹಾಗೂ ಕ್ಯಾಪ್ಸೂಲ್ಗಳ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿ ಪ್ರಕಟಣೆ ಹೊರಡಿಸಿದೆ.
ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಒಳಪಡದ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲಿನ ವ್ಯಾಪಾರ ಲಾಭಾಂಶದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸಿತ್ತು. ಹೀಗಾಗಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ 70% ರಷ್ಟು ಕಡಿಮೆಯಾಗಲಿದೆ.
ಈ ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಎಲ್ಲಾ ಸಗಟು ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಟೊರೆಂಟ್ ಫಾರ್ಮಾ ಸಂಸ್ಥೆಯು ಸೂಚಿಸಿದೆ. ನವೆಂಬರ್ 9 ರಿಂದ ಜಾರಿಗೆ ಬರುವಂತೆ, ಔಷಧ ಪ್ಯಾಕ್ ಮೇಲೆ ಮುದ್ರಿಸಲಾದ ದರ ಅಥವಾ ಪರಿಷ್ಕೃತ ದರ-ಇವೆರಡರಲ್ಲಿ ಯಾವುದು ಕಡಿಮೆಯೋ ಅದೇ ದರ ನೀಡಿ ಗ್ರಾಹಕರು ಖರೀದಿ ಮಾಡಬೇಕಾಗುತ್ತದೆ.