ಚೆನ್ನೈ, ಅ.27 (DaijiworldNews/AA): ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಖೈದಿಗಳು ಪರಾರಿಯಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಥೇಣಿ ಉಪಜೈಲಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಪರಾರಿಯಾದ ಖೈದಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗಾಗಿ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಶೋಧ ಕಾರ್ಯಾಚರಣೆ ವೇಳೆ ಓರ್ವ ಪರಾರಿಯಾದ ಖೈದಿಯನ್ನು ಬಂಧಿಸಲಾಗಿದೆ. ಖೈದಿಗಳು ಪರಾರಿಯಾದ ಹಿನ್ನೆಲೆ ನೆರೆಯ ಜಿಲ್ಲೆಗಳಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಿಂಡಿಗಲ್ ಜಿಲ್ಲೆಯ 16 ಸ್ಥಳಗಳಲ್ಲಿ ವಾಹನಗಳ ತಪಾಸಣೆಗಾಗಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಾರಿಯಾದ ಎಲ್ಲಾ 17 ಆರೋಪಿಗಳನ್ನು ಒಂದೇ ಸೆಲ್ನಲ್ಲಿ ಇರಿಸಲಾಗಿತ್ತು. ಅವರಲ್ಲಿ ಓರ್ವ ಖೈದಿಗೆ ಅನಾರೋಗ್ಯ ಉಂಟಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಜೈಲು ಸಿಬ್ಬಂದಿ ಸೆಲ್ಗೆ ತೆರಳಿದ್ದರು. ಈ ವೇಳೆ ಖೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಥೇಣಿ ಜಿಲ್ಲಾ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-2 ಪೊಲೀಸ್ ಸಿಬ್ಬಂದಿ ತಲೆಗೆ ಗಾಯವಾಗಿದೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಬ್ಬರು ಜೈಲು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಖೈದಿಗಳ ಪರಾರಿ ಕುರಿತು ನೆರೆಯ ಜಿಲ್ಲೆಗಳ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಇಡುಕ್ಕಿ, ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪರಾರಿಯಾದ ಖೈದಿಗಳನ್ನು ಗುರುತಿಸಿ ಬಂಧಿಸಲು ಅವರ ಭಾವಚಿತ್ರಗಳನ್ನು ಪೊಲೀಸ್ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.