ಬೆಂಗಳೂರು, ಅ.26 (DaijiworldNews/AK): ರಾಜ್ಯದ ಉಸ್ತುವಾರಿಗಳಾದ ಹರೀಶ್ ದ್ವಿವೇದಿ ಅವರು ನವೆಂಬರ್ 2, 3 ಮತ್ತು 4 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ನವೆಂಬರ್ 2 ರಂದು ಬೆಂಗಳೂರಿನಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ದ್ವಿವೇದಿ ಅವರು ಕೋರ್ ಕಮಿಟಿ ಸದಸ್ಯರು ಹಾಗೂ ಹಿರಿಯ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎಂದು ವಿವರಿಸಿದರು. ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗುತ್ತಿದೆ. ಖಾಸಗಿ ಸಮೀಕ್ಷೆಯೊಂದು ಬಿಜೆಪಿ 115 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ ಎಂದು ಗಮನ ಸೆಳೆದರು.ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಇಚ್ಛಾಶಕ್ತಿಯ ಕೊರತೆಯಿದೆ ಎಂದು ಆರೋಪಿಸಿದರು. ಮೀಸಲಾತಿ ವರ್ಗೀಕರಣದಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿ, ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುವ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಬಿಜೆಪಿ ಈ ಚುನಾವಣೆಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರದ ವೈಫಲ್ಯ
ತೀವ್ರ ಬರಗಾಲದ ಸಂದರ್ಭದಲ್ಲೂ ಕಾವೇರಿ ಕೊಳ್ಳದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ಸುಪ್ರೀಂ ಕೋರ್ಟ್ ಹಾಗೂ ಟ್ರಿಬ್ಯೂನಲ್ ಮುಂದೆ ರಾಜ್ಯದ ಪರಿಸ್ಥಿತಿಯನ್ನು ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಎಡವಿದೆ ಎಂದು ಹೇಳಿದರು.