ಲಖನೌ, ಅ.26 (DaijiworldNews/AA): ಕಾರು ಪಾರ್ಕಿಂಗ್ ವಿಚಾರವಾಗಿ ನಡೆದ ಸಣ್ಣ ಗಲಾಟೆಯೊಂದು ಮೂವರ ಕೊಲೆಯಲ್ಲಿ ಅಂತ್ಯವಾದ ಘಟನೆ ಲಖನೌದ ಸಾದತ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಬಸ್ತಾ ಪ್ರದೇಶದಲ್ಲಿ ಸೋಮವಾರ ಸಂಭವಿಸಿದೆ.

ಈ ಘಟನೆಯು ನೌಬಸ್ತಾದ ಬ್ರಾಹ್ಮಣಿ ಟೋಲಾ ಪ್ರದೇಶದಲ್ಲಿ ನಡೆದಿದೆ. ಖಾಲಿ ನಿವೇಶನವೊಂದರಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿದ್ದು, ಈ ವೇಳೆ, ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳದ ವೇಳೆ ರಿಷಭ್ ಶುಕ್ಲಾ (30) ಎಂಬಾತ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಶಿವಾಜಿ ತಿವಾರಿ(62), ಶಿವೇಂದ್ರ ತಿವಾರಿ (55) ಮತ್ತು ಸುಯಶ್ ತಿವಾರಿ (30) ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಮತ್ತು ನಾಲ್ಕು ಖಾಲಿ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟವರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.