ನವದೆಹಲಿ,ಅ.26 (DaijiworldNews/AK): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ನವೆಂಬರ್ 1ರಿಂದ ಮಹತ್ವದ ವಾಹನ ನಿರ್ಬಂಧ ಜಾರಿಗೆ ಬರಲಿದೆ.

ಭಾರತ್ ಸ್ಟೇಜ್-6 (ಬಿಎಸ್-6) ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸದ, ದೆಹಲಿಯ ಹೊರಗೆ ನೋಂದಣಿಯಾಗಿರುವ ವಾಹನಗಳಿಗೆ ರಾಜಧಾನಿ ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಈ ಕ್ರಮದಿಂದ ನೆರೆಯ ರಾಷ್ಟ್ರೀಯ ರಾಜಧಾನಿ ವಲಯದ 10 ಲಕ್ಷಕ್ಕೂ ಹೆಚ್ಚು ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಈ ನಿರ್ಬಂಧವು ನವೆಂಬರ್ 1ರಿಂದ ಜನವರಿ 31ರವರೆಗೆ ಜಾರಿಯಲ್ಲಿರಲಿದೆ. ದೆಹಲಿಗೆ ಪ್ರತಿನಿತ್ಯ ಉದ್ಯೋಗ, ವ್ಯಾಪಾರ ಹಾಗೂ ಇತರ ಕೆಲಸಗಳಿಗಾಗಿ ಸಂಚರಿಸುವ ವಾಹನ ಸವಾರರಿಗೆ ಈ ನಿರ್ಧಾರದಿಂದ ತೊಂದರೆಯಾಗುವ ಸಾಧ್ಯತೆಯಿದೆ.
ನಿರ್ಬಂಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದೆಹಲಿಯ ಗಡಿ ಪ್ರವೇಶ ಮಾರ್ಗಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುತ್ತಿದೆ. ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ಗುರುತಿಸುವ ಎಎನ್ಪಿಆರ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ನೆರವಿನಿಂದ ನಿಯಮ ಉಲ್ಲಂಘಿಸುವ ವಾಹನಗಳನ್ನು ಗುರುತಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇದಲ್ಲದೆ, ಸಾರಿಗೆ ಇಲಾಖೆಯ ಸುಮಾರು 300 ಜಾರಿ ಸಿಬ್ಬಂದಿಯನ್ನು ನಿಯೋಜಿಸಿ, ನಿರ್ಬಂಧಿತ ವಾಹನಗಳು ದೆಹಲಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.