ನವದೆಹಲಿ, ಅ.26 (DaijiworldNews/AA): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಬಳಸಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದು, 'ಭಾರತೀಯ ರಾಜಕೀಯ ಸಂಸ್ಕೃತಿಯನ್ನು ಕಾಂಗ್ರೆಸ್ ನಾಶಪಡಿಸುತ್ತಿದೆ' ಎಂದು ಕಿಡಿಕಾರಿದ್ದಾರೆ.

ದೆಹಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಮಾತ್ರ ಇನ್ಮೆಚೂರ್ ಎಂದು ನಾವು ಭಾವಿಸಿದ್ದೆವು. ಆದರೆ ಅವರೊಂದಿಗೆ ಸೇರಿಕೊಂಡು, ಈಗ ಎಲ್ಲರೂ ಇನ್ಮೆಚೂರ್ ಆಗಿದ್ದಾರೆ, ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುವ ಮೂಲಕ ಅವರು ಭಾರತದ ರಾಜಕೀಯ ಸಂಸ್ಕೃತಿಯನ್ನು ಅಥವಾ ತಮ್ಮ ಕ್ಷೇತ್ರದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ" ಎಂದು ಹೇಳಿದರು.
"ರಾಹುಲ್ ಗಾಂಧಿ ಒಡನಾಟದಲ್ಲಿರುವುದರಿಂದ, ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಹಲವು ರಾಜ್ಯಾಧ್ಯಕ್ಷರು ಎಲ್ಲರೂ ಒಂದೇ ರೀತಿಯ ಭಾಷೆಯನ್ನು ಬಳಸುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಅವರೆಲ್ಲರ ಮೇಲೆ ಪ್ರಭಾವ ಬೀರಿದೆ. ಸದಾ ತಮ್ಮ ನಾಯಕರೊಂದಿಗೆ ಇರುತ್ತಾರೆ ಮತ್ತು ಅವರು ಹೇಳಿದ್ದನ್ನೇ ಫಾಲೋ ಮಾಡುತ್ತಾರೆ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಇದೇ ರೀತಿಯ ಭಾಷೆ ಬಳಸಿದ್ದರು. ಈಗ ಇವರು ಅದೇ ರೀತಿ ಮಾಡುತ್ತಿದ್ದಾರೆ" ಎಂದಿದ್ದಾರೆ.