ಬೆಂಗಳೂರು, ಅ.26 (DaijiworldNews/AK): ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯವರ ತಂದೆ ಕುರಿತು ಕೆಟ್ಟ ಭಾಷೆ ಬಳಸಿದ್ದು ಖಂಡನೀಯ. ಹತಾಶರಾದ ಖರ್ಗೆಯವರು ಕೀಳುಮಟ್ಟದ ಭಾಷೆ ಬಳಸಿದ್ದು ಆಕ್ಷೇಪಾರ್ಹ ಎಂದು ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಲು ಬಿಜೆಪಿ ವತಿಯಿಂದ ಇಂದು ಫ್ರೀಡಂ ಪಾರ್ಕಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಖರ್ಗೆ ಅವರು, ತಾಳ್ಮೆ ಕಳೆದುಕೊಂಡು, ಬುದ್ಧಿ ಕಳೆದುಕೊಂಡು, ತಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡು, ಹತಾಶರಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಸರಕಾರದ ಜನಪರ ಕೆಲಸಗಳನ್ನು ಸಹಿಸಿಕೊಳ್ಳಲು ಇವರಿಗೆ ಆಗುತ್ತಿಲ್ಲ ಎಂದು ತಿಳಿಸಿದರು.
ಜನರು ಕಾಂಗ್ರೆಸ್ ಪಕ್ಷವನ್ನು ದೇಶಾದ್ಯಂತ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿಗರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಚಾರದಲ್ಲಿ ಗೌರವ ಇಲ್ಲ. ಅವರಿಗೆ ಹೇಗಾದರೂ ಅಧಿಕಾರ ಬೇಕಿದೆ ಎಂದು ಟೀಕಿಸಿದರು.
ಖರ್ಗೆಯವರು ನಕಲಿ ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರಿಸುವವರು. ಜನರಿಂದ ಆಯ್ಕೆಯಾದ ಪ್ರಧಾನಿಯವರನ್ನು, ಅವರ ತಂದೆಯನ್ನು ಜೈಲಿಗೆ ಕಳಿಸುವುದಾಗಿ ಹೇಳುತ್ತಾರೆ ಎಂದು ಖಂಡಿಸಿದರು. ಇವತ್ತು ಭಷ್ಟ್ರಾಚಾರ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಭ್ರಷ್ಟ್ರಾಚಾರ ಎಂದಾಗಿದೆ ಎಂದು ಟೀಕಿಸಿದರು.
ಖರ್ಗೆಯವರು ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಮತ್ತು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಎಐಸಿಸಿ ಅಧ್ಯಕ್ಷರ ಈ ತಪ್ಪಿಗೆ ಜನತೆ ಮುಂದೆ ತಕ್ಕ ಶಿಕ್ಷೆ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.