ದೊಡ್ಡಬಳ್ಳಾಪುರ, ಅ.26 (DaijiworldNews/TA): ಮೇಯಲು ಬಿಟ್ಟಿದ್ದ ಮೇಕೆಯನ್ನು ಕಟ್ಟಿಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿಯಲ್ಲಿ ನಡೆದಿದೆ. 2021ರಲ್ಲಿ ನಡೆದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ರವಿ ಕುಮಾರ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿ ರವಿ ಕುಮಾರ್ ಕುಟುಂಬಕ್ಕೆ ಸೇರಿದ ಮೇಕೆಯೊಂದು ದೇವಾಲಯದ ಬಳಿ ಸ್ವಚ್ಛಂದವಾಗಿ ತಿರುಗಾಡುತ್ತಾ, ಸ್ಥಳೀಯ ನಿವಾಸಿ ಚಂದ್ರಶೇಖರ್ ಅವರ ಮೂರು ವರ್ಷದ ಮೊಮ್ಮಗಳಿಗೆ ಪದೇಪದೆ ತೊಂದರೆ ನೀಡುತ್ತಿತ್ತು ಎನ್ನಲಾಗಿದೆ. ಮೇಕೆಯನ್ನು ಕಟ್ಟಿಹಾಕುವಂತೆ ಚಂದ್ರಶೇಖರ್ ಕುಟುಂಬದವರು ಹಲವು ಬಾರಿ ಮನವಿ ಮಾಡಿದ್ದರೂ, ಅದು ದೇವಾಲಯಕ್ಕೆ ಸೇರಿದ ಪ್ರಾಣಿ ಎಂಬ ಕಾರಣ ನೀಡಿ ಆರೋಪಿಗಳು ನಿರಾಕರಿಸಿದ್ದರು.
2021ರ ಆಗಸ್ಟ್ 23ರಂದು ಮೇಕೆ ಮತ್ತೆ ಮಗುವಿಗೆ ತೊಂದರೆ ನೀಡಿದಾಗ, ಅದನ್ನು ಕಟ್ಟಿಹಾಕಲು ಚಂದ್ರಶೇಖರ್ ಕುಟುಂಬದವರು ಮುಂದಾಗಿದ್ದಾರೆ. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ರವಿ ಕುಮಾರ್, ಚಂದ್ರಶೇಖರ್ ಅವರ ಎದೆಯ ಎಡಭಾಗಕ್ಕೆ ಬಲವಾಗಿ ಗುದ್ದಿದ್ದಾನೆ ಎನ್ನಲಾಗಿದೆ. ಇದರಿಂದ ಕುಸಿದುಬಿದ್ದ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳು ಕಂಡುಬಂದಿರಲಿಲ್ಲ. ಹೀಗಾಗಿ ಆರೋಪಿಗಳ ಪರ ವಕೀಲರು ತಮ್ಮ ವಾದ ಮಂಡಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ಹಿಸ್ಟೋಪಥಾಲಜಿ ವರದಿಗಳು ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳಾಗಿವೆ. ತೀವ್ರ ದೈಹಿಕ ಆಘಾತ ಹಾಗೂ ಭಾವನಾತ್ಮಕ ಉದ್ವೇಗದಿಂದ ಹೃದಯದ ರಕ್ತನಾಳದಲ್ಲಿ ಅಡಚಣೆ ಉಂಟಾಗಿ ಸಾವು ಸಂಭವಿಸಿದೆ ಎಂದು ವೈದ್ಯರು ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರದ IV ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಪ್ರಮುಖ ಆರೋಪಿ ರವಿ ಕುಮಾರ್ಗೆ ಜೀವಾವಧಿ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ. ಪ್ರಕರಣದ ಇತರೆ ಸಹ ಆರೋಪಿಗಳಿಗೂ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.