ಮಧ್ಯಪ್ರದೇಶ, ಅ.26 (DaijiworldNews/TA): ಖಾರ್ಗೋನ್ ಜಿಲ್ಲೆಯ ಮಂಡಲೇಶ್ವರ ಪಟ್ಟಣದ ನರ್ಮದಾ ನದಿ ದಂಡೆಯಲ್ಲಿ 343 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಕಾಂಗ್ರೆಸ್ ಪಕ್ಷವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಭಾನುವಾರ ನರ್ಮದಾ ನದಿಯ ದಡದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಿಗೆ ಈ ಗುರುತಿನ ಚೀಟಿಗಳು ಸಿಕ್ಕಿವೆ. ಬಳಿಕ ಅವುಗಳನ್ನು ಸಂಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. ವಶಪಡಿಸಿಕೊಂಡ ಗುರುತಿನ ಚೀಟಿಗಳನ್ನು ತೋರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಘಟನೆ ಸಾರ್ವಜನಿಕರ ಗಮನ ಸೆಳೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ತೆಯಾದ ಮತದಾರರ ಗುರುತಿನ ಚೀಟಿಗಳು ನೆರೆಯ ಇಂದೋರ್ ಜಿಲ್ಲೆಯ ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ. ಈ ಗುರುತಿನ ಚೀಟಿಗಳು ನದಿ ದಂಡೆಗೆ ಹೇಗೆ ಬಂದವು ಮತ್ತು ಅವುಗಳನ್ನು ಅಲ್ಲಿ ಬಿಸಾಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಯಬೇಕಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿ ನಾಯಕ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮಂಡಲೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಮತದಾರರ ಗುರುತಿನ ಚೀಟಿಗಳು ಈ ರೀತಿ ಪತ್ತೆಯಾಗಿರುವುದರ ಬಗ್ಗೆ ಪ್ರಶ್ನೆ ಎತ್ತಿದ ಅವರು, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನದಿ ಪ್ರದೇಶದಲ್ಲಿ ಇನ್ನಷ್ಟು ಮತದಾರರ ಗುರುತಿನ ಚೀಟಿಗಳು ಇರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಕಾಂಗ್ರೆಸ್, ಡೈವರ್ಗಳ ನೆರವಿನಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಬೇಕೆಂದು ಆಗ್ರಹಿಸಿದೆ. ಎಫ್ಐಆರ್ ದಾಖಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ರವಿ ನಾಯಕ್ ಎಚ್ಚರಿಕೆ ನೀಡಿದ್ದಾರೆ. ನರ್ಮದಾ ನದಿಯ ದಡದಲ್ಲಿ ನಡೆದ ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವುದನ್ನು ಮಂಡಲೇಶ್ವರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಶ್ವೇತಾ ಶುಕ್ಲಾ ದೃಢಪಡಿಸಿದ್ದಾರೆ.
ಕಂದಾಯ ಇಲಾಖೆಯ ತಂಡವು ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೂ ದೂರು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮತದಾರರ ಗುರುತಿನ ಚೀಟಿಗಳು ನದಿ ದಂಡೆಯಲ್ಲಿ ಪತ್ತೆಯಾಗಿರುವುದಕ್ಕೆ ನಿಖರ ಕಾರಣವೇನು, ಅವುಗಳನ್ನು ಅಲ್ಲಿ ತಂದು ಹಾಕಿದವರು ಯಾರು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.