ನವದೆಹಲಿ, ಅ.26 (DaijiworldNews/TA): ರಾಷ್ಟ್ರ ರಾಜಧಾನಿ ದೆಹಲಿಯ ರೈಸಿನಾ ಬೆಟ್ಟದಲ್ಲಿರುವ ಐತಿಹಾಸಿಕ ನಾರ್ತ್ ಬ್ಲಾಕ್ ಕಟ್ಟಡದ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಕಟ್ಟಡದ ಮೇಲ್ಛಾವಣಿಯಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿರುವುದು ಕಂಡುಬಂದಿದೆ. ಮಾಹಿತಿ ತಿಳಿದ ತಕ್ಷಣ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು.

ಅಗ್ನಿಶಾಮಕ ಇಲಾಖೆಯ ಪ್ರಕಾರ, ನಾರ್ತ್ ಬ್ಲಾಕ್ನ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿದ್ದ ಹವಾನಿಯಂತ್ರಣ ವ್ಯವಸ್ಥೆಯ ಬಾಯ್ಲರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವೆಲ್ಡಿಂಗ್ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆಯ ಮಾಹಿತಿ ಲಭ್ಯವಾದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ನಾರ್ತ್ ಬ್ಲಾಕ್ ದೆಹಲಿಯ ರೈಸಿನಾ ಬೆಟ್ಟದಲ್ಲಿರುವ ಐತಿಹಾಸಿಕ ಕೆಂಪು ಮರಳುಗಲ್ಲಿನ ಆಡಳಿತ ಕಟ್ಟಡವಾಗಿದ್ದು, ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳು ಇಲ್ಲಿವೆ. ಇಂತಹ ಪ್ರಮುಖ ಕಟ್ಟಡದ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.
ಸಂಸತ್ತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಾರ್ತ್ ಬ್ಲಾಕ್ ಕಟ್ಟಡದ ಹಿಂಭಾಗದಿಂದ ದಟ್ಟ ಹೊಗೆ ಏರುತ್ತಿರುವುದನ್ನು ಗಮನಿಸಿದ್ದಾಗಿ ಸಂಸದ ಮಿಲಿಂದ್ ದಿಯೋರಾ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸಂಸತ್ತಿಗೆ ಹೋಗುವಾಗ ನಾರ್ತ್ ಬ್ಲಾಕ್ನ ಹಿಂದಿನಿಂದ ದಟ್ಟ ಹೊಗೆ ಏರುತ್ತಿರುವುದನ್ನು ಗಮನಿಸಿದೆ. ಅಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ತೋರುತ್ತಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ತುರ್ತು ಸೇವೆಗಳು ತ್ವರಿತವಾಗಿ ಸ್ಪಂದಿಸುತ್ತಿವೆ ಎಂದು ಆಶಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.
ವೆಲ್ಡಿಂಗ್ ಕೆಲಸದ ವೇಳೆ ಸಂಭವಿಸಿರಬಹುದಾದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರುವ ಸಾಧ್ಯತೆಯನ್ನು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಘಟನೆಯಿಂದ ಉಂಟಾದ ಹಾನಿ ಹಾಗೂ ಇತರ ವಿವರಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.