ಕಲಬುರಗಿ, ಅ.25 (DaijiworldNews/TA): ಸೇಡಂ ಪಟ್ಟಣದ ಹೊರವಲಯದಲ್ಲಿ ಹರಿಯುವ ಕಮಲಾವತಿ ನದಿಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನದಿಗೆ ಸಿಮೆಂಟ್ ಕಾರ್ಖಾನೆಯಿಂದ ವಿಷಪೂರಿತ ನೀರು ಹರಿಸಿರುವುದೇ ಮೀನುಗಳ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇಡಂ ಪಟ್ಟಣದ ಜನರ ಜೀವನಾಡಿಯಾಗಿರುವ ಕಮಲಾವತಿ ನದಿಯಲ್ಲಿ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿರುವುದು ನದಿಯ ನೀರಿನ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾರ್ಖಾನೆಯಿಂದ ಹೊರಬರುವ ಕಲುಷಿತ ನೀರು ನದಿಗೆ ಸೇರುತ್ತಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ನದಿಯ ನೀರನ್ನು ಪ್ರಾಣಿಗಳು, ಪಕ್ಷಿಗಳು ಹಾಗೂ ದನಕರುಗಳು ಕುಡಿಯುತ್ತವೆ. ಇಂತಹ ನೀರು ಕಲುಷಿತಗೊಂಡಿದ್ದರೆ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇದಕ್ಕೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ನದಿಯ ನೀರಿನ ಮಾದರಿಗಳನ್ನು ತಕ್ಷಣ ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕು. ಮೀನುಗಳ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಿ, ನದಿಗೆ ಕಲುಷಿತ ನೀರು ಹರಿಸಲಾಗುತ್ತಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಮಲಾವತಿ ನದಿಯ ನೀರಿನ ಮೇಲೆ ಅವಲಂಬಿತರಾಗಿರುವ ಜನರು ಮತ್ತು ಜಾನುವಾರುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮೀನುಗಳ ಸಾವಿಗೆ ನಿಜವಾದ ಕಾರಣವೇನು ಎಂಬುದು ಅಧಿಕೃತ ಪರೀಕ್ಷೆಯಿಂದ ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ, ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.