ನವದೆಹಲಿ, ಅ.25 (DaijiworldNews/AK): ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕಂಡಿದ್ದ ಡೆಹ್ರಾಡೂನ್ನ ಪ್ರತಿಭಾವಂತೆ ಕುಹೂ ಗಾರ್ಗ್, ಇಂದು ಭಾರತೀಯ ಪೊಲೀಸ್ ಇಲಾಖೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕ್ರೀಡಾಲೋಕದಿಂದ ಪೊಲೀಸ್ ಇಲಾಖೆ ಯತ್ತ ಮುಖಮಾಡಿದ ಅವರ ಈ ಅದ್ಭುತ ಪಯಣ ಸಾವಿರಾರು ಯುವಜನತೆಗೆ ಸ್ಫೂರ್ತಿ.

ಕುಹೂ ಗಾರ್ಗ್ ಕೇವಲ 12ನೇ ವಯಸ್ಸಿನಲ್ಲಿಯೇ ಅಂಡರ್ 13 ಬಾಲಕಿಯರ ವಿಭಾಗದಲ್ಲಿ ಅಖಿಲ ಭಾರತ ಫೈನಲ್ಸ್ ತಲುಪುವ ಮೂಲಕ ಕ್ರೀಡಾ ಲೋಕದಲ್ಲಿ ಒಂದು ಹೊಸ ಭರವಸೆ ಮೂಡಿಸಿದ್ದರು. ಭಾರತವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಇವರು, ಮಿಕ್ಸೆಡ್ ಡಬಲ್ಸ್ನಲ್ಲಿ ವಿಶ್ವದ 34ನೇ ಶ್ರೇಯಾಂಕ (World No. 34) ಪಡೆದಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನ ಪಡೆದಿದ್ದರು. 2013 ರಿಂದ 2020ರವರೆಗೆ, ಅಂದರೆ ಕೋವಿಡ್ ಎದುರಾಗುವವರೆಗೂ ಅವರು ಭಾರತೀಯ ಬ್ಯಾಡ್ಮಿಂಟನ್ ತಂಡದ ಸಕ್ರಿಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು.
ಕ್ರೀಡೆಯಿಂದ ಸಿವಿಲ್ ಸರ್ವಿಸ್ ಕಡೆಗೆ ಕುಹೂ ಪಯಣ ಕ್ರೀಡಾ ಜೀವನ ಒಂದು ಹಂತದಲ್ಲಿ ಸಾಗುತ್ತಿದ್ದಾಗ ಕಾಡಿದ ಬೆನ್ನುನೋವು, ದೇಹಕ್ಕೆ ಆದ ಗಾಯ ಹಾಗೂ ಕೊರೊನಾ ಅವರ ಕ್ರೀಡಾ ಬದುಕಿಗೆ ದೊಡ್ಡ ಅಡ್ಡಿಯಾಯಿತು. ಆದರೆ ಇದರಿಂದ ಹೆದರದ ಕುಹೂ ತಮ್ಮ ಗುರಿಯನ್ನ ನಾಗರಿಕ ಸೇವೆಗಳ ಕಡೆಗೆ ತಿರುಗಿಸಿದರು. ದೆಹಲಿಯ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅವರು, ಪೋಷಕರ ಪ್ರೋತ್ಸಾಹದಿಂದ ಯುಪಿಎಸ್ಸಿ ಪರೀಕ್ಷಾ ಸಿದ್ಧತೆ ಆರಂಭಿಸಿದರು. ಅವರ ತಂದೆ ಅಶೋಕ್ ಕುಮಾರ್ ಉತ್ತರಾಖಂಡದ ಮಾಜಿ ಡಿಜಿಪಿ ಮತ್ತು ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ತಂದೆ ನಡೆದ ಹಾದಿಯೇ ಇವರಿಗೆ ಖಾಕಿ ತೊಡಲು ದೊಡ್ಡ ಸ್ಫೂರ್ತಿಯಾಯಿತು. ಯುಪಿಎಸ್ಸಿಯ ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾದ ನಂತರ ಯುಪಿಎಸ್ಸಿ ಸಿಎಸ್ಇ 2023ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 178ನೇ ರ್ಯಾಂಕ್ ಗಳಿಸುವ ಮೂಲಕ ಐಪಿಎಸ್ ಹುದ್ದೆಗೆ ಆಯ್ಕೆಯಾಗಿ, ಗುಜರಾತ್ ಕೇಡರ್ಗೆ ನಿಯೋಜನೆಗೊಂಡರು.
ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ಕುಹೂ ಗಾರ್ಗ್ ಅವರು ಇದೀಗ ಫೇಸ್-1 ತರಬೇತಿಯಲ್ಲಿ ಅತ್ಯುತ್ತಮ ಹೊರಾಂಗಣ ಪ್ರೊಬೇಷನರ್ ಆಗಿ ಪ್ರತಿಷ್ಠಿತ 'ಸ್ವೋರ್ಡ್ ಆಫ್ ಹಾನರ್' ಪ್ರಶಸ್ತಿಯನ್ನ ಮುಡಿಗೇರಿಸಿ ಕೊಂಡಿದ್ದಾರೆ. ಬ್ಯಾಡ್ಮಿಂಟನ್ ರ್ಯಾಕೆಟ್ ಹಿಡಿಯುತ್ತಿದ್ದ ಕೈಗಳು ಇಂದು ಹೆಮ್ಮೆಯಿಂದ ಪೊಲೀಸ್ ಸಮವಸ್ತ್ರ ತೊಟ್ಟು ಸಮಾಜ ಸೇವೆ ಮಾಡುತ್ತಿದ್ದಾರೆ.