ದೊಡ್ಡಬಳ್ಳಾಪುರ, ಅ.24 (DaijiworldNews/AK): ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಇಲ್ಲಿ ಆಯೋಜಿಸಿದ್ದ ರೈತ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರ ದೇಶದ ಅನ್ನದಾತರಿಗೆ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸೇರಿದಂತೆ ಹಲವು ಅನುಕೂಲಗಳನ್ನು ಮಾಡುತ್ತಿದೆ. ಆದರೆ ಅಧಿಕಾರಕ್ಕೆ ಬರಲು ವಿಫಲವಾದ ಕಾಂಗ್ರೆಸ್, ಮೋದಿ ಅವರ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭೀಕರ ಬರ ಇದ್ದರೂ ನಿರ್ಲಕ್ಷ್ಯ ಮಾಡಿದೆ. ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಅನ್ನದಾತರ ನೆರವಿಗೆ ಬಂದಿಲ್ಲ. ನಾವು ಹೋರಾಟ ಮಾಡಿದ ನಂತರ ಅಧಿವೇಶನ ಕರೆದು ರೈತ ಕುಟುಂಬಕ್ಕೆ ಎರಡೂವರೆ ಸಾವಿರ ಕೊಡ್ತೇವೆ ಎಂದು ಭಿಕ್ಷೆ ನೀಡುವ ರೀತಿ ಘೋಷಣೆ ಮಾಡಿದೆ ಎಂದು ದೂರಿದರು.
ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ಮೂರೂವರೆ ವರ್ಷದಲ್ಲಿ ಒಂದು ಮನೆ ನೀಡಿಲ್ಲ. ವಿಶೇಷ ಚೇತನರು, ವಿಧವೆಯರಿಗೆ ಹಾಗೂ ವೃದ್ಧರಿಗೆ ನೀಡಬೇಕಾದ ಮಾಶಾಸನ ನೀಡುತ್ತಿಲ್ಲ. ಎಲ್ಲಕ್ಕೂ ಅವರು ಪ್ರತಿಭಟನೆ ಮಾಡ್ತಾ ಇದ್ದಾರೆ. ರಾಜ್ಯದ ಜನರ ಪಾಲಿಗೆ ಸರ್ಕಾರ ಬದುಕಿದ್ದೂ ಸತ್ತಂತೆ ಎಂದು ಆಕ್ಷೇಪಿಸಿದರು.
ಕನಕಪುರದಲ್ಲಿ ರೈತರಿಗೆ ಒಂದು ಇಂಚೂ ಜಮೀನು ಮಾರಬೇಡಿ ಎಂದು ಹೇಳುವ ಸಿಎಂ ಬಿಡದಿಯಲ್ಲಿ ರೈತರ ಮೇಳೆ ದಬ್ಬಾಳಿಕೆ ಮಾಡಿ ಜಮೀನು ಕಸಿಯುವ ಕೆಲಸ ಮಾಡ್ತಾ ಇದ್ದಾರೆ. ದೊಡ್ಡಬಳ್ಳಾಪುರದಲ್ಲೂ ಬಲವಂತವಾಗಿ ಜಮೀನು ಕಸಿತಾ ಇದ್ದಾರೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಎಂದು ದೂರಿದರು.
ಸಿಎಂಗೆ ರೈತರ ಬಗ್ಗೆ ಕಾಳಜಿ ಇಲ್ಲ ಬದಲಿಗೆ ರಿಯಲ್ ಎಸ್ಟೇಟ್ ಕಡೆಗೆ ಮಾತ್ರ ಆಸಕ್ತಿ ಇದೆ. ಸಿಎಂ ಅಧಿಕಾರದ ಅಮಲಿನಲ್ಲಿ ತೇಲುತ್ತಾ ಇದ್ದಾರೆ. ಈ ಸರ್ಕಾರಕ್ಕೆ ಮುಂದೆ ಜನರು ತಕ್ಕ ಪಾಠ ಕಲಿಸಬೇಕಿದೆ. ಲಂಚ ಕೊಡದೆ ಸರ್ಕಾರದಲ್ಲಿ ಏನೂ ಆಗಲ್ಲ. ಇಂತಹ ಕಳ್ಳರು ನುಡಿದಂತೆ ನಡೆಯುತ್ತಾ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರೈತರ ಪಂಪ್ ಸೆಟ್ಗೆ ಸರ್ಕಾರ ಸರಿಯಾಗಿ ವಿದ್ಯುತ್ ನೀಡುತ್ತಾ ಇಲ್ಲ. ದರಿದ್ರ ರೈತ ವಿರೋಧಿ ಸರ್ಕಾರ ಇದು. ಈ ಸರ್ಕಾರದಿಂದ ಯಾವುದೇ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರತಿ ಹೆಕ್ಟೇರ್ಗೆ ಐವತ್ತು ಸಾವಿರ ನೀಡಿ, ಕೃಷಿ ಸಾಲ ಮನ್ನಾ ಮಾಡಿ ಎಂದು ನಾವು ಬಳ್ಳಾರಿ ಚಲೋದಲ್ಲಿ ಒತ್ತಾಯ ಮಾಡಿದ್ದೇವು. ಆದರೆ ಈವರೆಗೂ ಸಿಎಂ ರೈತರಿಗೆ ಏನೂ ಮಾಡಲಿಲ್ಲ ಎಂದರು.