ನವದೆಹಲಿ, ಅ.24 (DaijiworldNews/AK): ಕರ್ನಾಟಕ ರಾಜಕೀಯದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್ ಸಂಬಂಧಿತ ಚರ್ಚೆ ನಡೆಯುತ್ತಿರುವ ವೇಳೆ ಮತ್ತೊಂದು ಸ್ಫೋಟಕ ಆರೋಪ ಕೇಳಿಬಂದಿದೆ.

‘ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ. ಅಲ್ಲಿಯೂ ಕೆಲವು ಸ್ಟಿಂಗ್ ಆಪರೇಷನ್ಗಳು ನಡೆದಿವೆ. ಆ ಸಿಡಿಗಳು ಯಾವಾಗ ಹೊರಬರುತ್ತವೆ ಎಂಬುದನ್ನು ನೋಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ತಾವು ಬಹಳ ಹಿಂದೆಯೇ ಹೇಳಿದ್ದಾಗಿ ತಿಳಿಸಿದರು. ಒಂದು ಸಿಡಿ ಫ್ಯಾಕ್ಟರಿ ಯಾವುದು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದ ಅವರು, ಮತ್ತೊಂದು ಫ್ಯಾಕ್ಟರಿ ಬಿಜೆಪಿಯಲ್ಲೂ ಇದೆ ಎಂದು ಆರೋಪಿಸಿದರು.
ರಾಜಕೀಯ ಎದುರಾಳಿಗಳು ಹಾಗೂ ಭವಿಷ್ಯದಲ್ಲಿ ತಮಗೆ ಅಡ್ಡಿಯಾಗಬಹುದು ಎಂದು ಭಾವಿಸುವವರನ್ನು ಬ್ಲ್ಯಾಕ್ಮೇಲ್ ಮಾಡಲು ಇಂತಹ ವಿಡಿಯೋಗಳನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.
ಕರ್ನಾಟಕದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್ಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುವುದು ಒಂದು ವ್ಯವಹಾರವಾಗಿ ಬೆಳೆದಿದೆ. ರಾಜಕೀಯಕ್ಕೆ ಯಾವುದೋ ನೆಪದಲ್ಲಿ ಪ್ರವೇಶಿಸಿ, ವಿಡಿಯೋಗಳನ್ನು ಮಾಡಿಕೊಂಡು ಹಣಕ್ಕಾಗಿ ಶಾಸಕರನ್ನೇ ಬ್ಲ್ಯಾಕ್ಮೇಲ್ ಮಾಡುವ ತಂಡಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ ಎಂದು ಯತ್ನಾಳ್ ಆರೋಪಿಸಿದರು.