ಚೆನ್ನೈ, ಅ.24 (DaijiworldNews/TA): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರವಾಸಿ ತಾಣ ಕೊಡೈಕೆನಾಲ್ನಲ್ಲೂ ಮಳೆಯ ಅಬ್ಬರ ಮುಂದುವರಿದಿದ್ದು, ಮುಖ್ಯ ಘಾಟ್ ರಸ್ತೆಯ ಮೂರು ಕಡೆ ಭೂಕುಸಿತ ಸಂಭವಿಸಿದೆ. ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಅಕ್ಟೋಬರ್ 23ರ ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಬಟ್ಲಗುಂಡು–ಕೊಡೈಕೆನಾಲ್ ಘಾಟ್ ರಸ್ತೆಯ ಶ್ರೀನಿವಾಸಪುರ ಮತ್ತು ಶೆಂಬಗನೂರು ಜಂಕ್ಷನ್ ಸಮೀಪ ಸೇರಿದಂತೆ ಸುಮಾರು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ. ಬೆಟ್ಟದಿಂದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಶುಕ್ರವಾರ ಮಧ್ಯಾಹ್ನ ಕೊಡೈಕೆನಾಲ್ ಪ್ರದೇಶದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ಘಾಟ್ ರಸ್ತೆಯಲ್ಲಿ ಹಠಾತ್ ಪ್ರವಾಹದ ರೀತಿಯಲ್ಲಿ ನೀರು ಹರಿದಿದೆ. ಇದರಿಂದ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
ಮಾಹಿತಿ ಪಡೆದ ಹೆದ್ದಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ರಸ್ತೆಗೆ ಬಿದ್ದಿದ್ದ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ಕೈಗೊಂಡಿದ್ದಾರೆ. ಇನ್ನೊಂದೆಡೆ, ಸಿಲ್ವರ್ ಕ್ಯಾಸ್ಕೇಡ್ ಜಲಪಾತದ ಸಮೀಪವೂ ನೀರಿನ ತೀವ್ರ ಹರಿವಿನಿಂದಾಗಿ ಭೂಕುಸಿತ ಸಂಭವಿಸಿದೆ. ಇದರಿಂದ ರಸ್ತೆಯಲ್ಲಿ ದೊಡ್ಡದಾದ ಹಾಗೂ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಪಳನಿ ಪ್ರದೇಶದಲ್ಲಿಯೂ ಭಾರೀ ಮಳೆಯಾಗಿದ್ದು, ಹಲವು ವಸತಿ ಪ್ರದೇಶಗಳಲ್ಲಿ ನೀರು ನಿಂತಿರುವುದು ವರದಿಯಾಗಿದೆ.
ಈಶಾನ್ಯ ಮಾರುತಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೊಡೈಕೆನಾಲ್ ಮತ್ತು ತಂದಿಕುಡಿಗೆ ಪ್ರವಾಸ ಕೈಗೊಳ್ಳುವುದನ್ನು ತಪ್ಪಿಸುವಂತೆ ದಿಂಡುಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಭಾರೀ ಮಳೆ ಹಾಗೂ ಭೂಕುಸಿತದ ಅಪಾಯದ ಹಿನ್ನೆಲೆಯಲ್ಲಿ ಬೆಟ್ಟ ಪ್ರದೇಶಗಳಿಗೆ ಪ್ರಯಾಣಿಸುವವರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.