ತಿರುವನಂತಪುರಂ, ಅ.24 (DaijiworldNews/AA): ರಾಜಭವನದ (ಲೋಕ ಭವನ) ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಮಾತ್ರ ತಯಾರಿಸಬೇಕು ಮತ್ತು ಯಾವುದೇ ಮಾಂಸಾಹಾರಿ ಖಾದ್ಯಗಳನ್ನು ಬೇಯಿಸಬಾರದು ಎಂದು ಕೇರಳದ ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರು ನಿರ್ದೇಶನ ನೀಡಿದ್ದಾರೆ.

ಕೇರಳದ 29ನೇ ರಾಜ್ಯಪಾಲರಾಗಿ ಹಿರಿಯ ಬಿಜೆಪಿ ಮುಖಂಡ ಓಂ ಪ್ರಕಾಶ್ ಮಾಥುರ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ತಮಿಳುನಾಡು ರಾಜ್ಯಪಾಲರಾಗಿ ವರ್ಗಾವಣೆಗೊಂಡ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಸ್ಥಾನಕ್ಕೆ ಮಾಥುರ್ ನೇಮಕಗೊಂಡಿದ್ದಾರೆ. ಇದೀಗ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ವಿವಾದವೊಂದಕ್ಕೆ ಸಿಲುಕಿದ್ದಾರೆ.
ಲೋಕ ಭವನದ ಅಡುಗೆಮನೆಯಲ್ಲಿ ಮಾಂಸಾಹಾರಿ ಆಹಾರವನ್ನು ತಯಾರಿಸಬಾರದು, ಬಡಿಸಬಾರದು ಎಂದು ಮಾಥುರ್ ನಿರ್ದೇಶನ ನೀಡಿದ್ದರು ಎಂದು ವರದಿಗಳು ತಿಳಿಸಿವೆ. ಈ ವರದಿಗಳಿಗೆ ಪ್ರತಿಕ್ರಿಯಿಸಿದ ರಾಜ್ಯಪಾಲರ ಕಚೇರಿಯ ಮೂಲಗಳು, ಮಾಥುರ್ ಅವರು ಅಪ್ಪಟ ಸಸ್ಯಾಹಾರಿ ಆಗಿರುವ ಕಾರಣ ಈ ಬದಲಾವಣೆಗೆ ಆದೇಶಿಸಿದ್ದರು ಎಂದು ತಿಳಿಸಿವೆ. ಲೋಕ ಭವನದ ಉದ್ಯೋಗಿಗಳ ಆಹಾರ ಆಯ್ಕೆಗಳ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಕೇರಳವು ಶ್ರೀಮಂತ ಮೀನು ಸಂಪನ್ಮೂಲ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿರುವ ಕರಾವಳಿ ರಾಜ್ಯ. ಕೇರಳೀಯರು ತಾವು ಏನು ತಿನ್ನಬೇಕು ಎಂಬುದನ್ನು ಆಯ್ಕೆ ಮಾಡಲು ಸ್ವತಂತ್ರರು. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಆಹಾರ ಪದ್ಧತಿಯನ್ನು ಇಡೀ ಕಚೇರಿಯ ಮೇಲೆ ಹೇರುವುದು ಸಂವಿಧಾನ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದು ಕೇರಳದಲ್ಲಿ ಸಂಘ ಪರಿವಾರದ ಕೇಸರಿ ಅಜೆಂಡಾವನ್ನು ಜಾರಿಗೆ ತರುವ ಹುನ್ನಾರ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಆಲಪ್ಪುಳ ಸಂಸದ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.