ನವದೆಹಲಿ, ಅ.24 (DaijiworldNews/AA): 2028ರ ವೇಳೆಗೆ ಸ್ಮಾರ್ಟ್ಫೋನ್ ಉದ್ಯಮದಲ್ಲಿ ಜಾಗತಿಕ ಮಟ್ಟದ ಅತಿದೊಡ್ಡ ಕಂಪನಿಗಳಾದ ಆಪಲ್ ಮತ್ತು ಸ್ಯಾಮ್ಸಂಗ್ ಮಾದರಿಯಲ್ಲೇ, ಭಾರತವೂ ತನ್ನದೇ ಆದ ಅಂತಹ ಕಂಪನಿಗಳನ್ನು ಹೊಂದಿರುತ್ತದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಇದು 2026ರ ಅಕ್ಟೋಬರ್. ಇದನ್ನು ಗಮನದಲ್ಲಿಟ್ಟುಕೊಳ್ಳಿ. 2028ರ ಅಕ್ಟೋಬರ್ 23ರ ವೇಳೆಗೆ, ನಿಮ್ಮ ಬಳಿ ಭಾರತದಲ್ಲಿ ವಿನ್ಯಾಸಗೊಂಡ, ಭಾರತದಲ್ಲಿ ತಯಾರಾದ ಮತ್ತು ಭಾರತೀಯ ಬ್ರಾಂಡ್ನ ಮೊಬೈಲ್ ಫೋನ್ಗಳು ಇರುತ್ತವೆ" ಎಂದು ತಿಳಿಸಿದ್ದಾರೆ.
"ಮೂರು ವರ್ಷಗಳ ಹಿಂದೆ ನಾವು ಭಾರತೀಯ ವಿನ್ಯಾಸಕರಿಗೆ ಒಂದು ಸವಾಲು ನೀಡಿದ್ದೆವು. ಮೊಬೈಲ್ ಫೋನ್ನ ಮದರ್ಬೋರ್ಡ್ ಆಗಿರುವ ಪಿಸಿಬಿಯನ್ನು ನೀವು ಏಕೆ ವಿನ್ಯಾಸಗೊಳಿಸಬಾರದು? ಅದನ್ನು ವಿನ್ಯಾಸಗೊಳಿಸಲು ನಿಮ್ಮಿಂದ ಏಕೆ ಸಾಧ್ಯವಿಲ್ಲ? ಆಗ ಎರಡು ಕಂಪನಿಗಳು ಮುಂದೆ ಬಂದು ಅದನ್ನು ವಿನ್ಯಾಸಗೊಳಿಸಿದವು. ಅವುಗಳಲ್ಲಿ ಒಂದು ಕಂಪನಿಯು ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ್ದು, ಇಂದು ಆ ಕಂಪನಿಯ ವಿನ್ಯಾಸವನ್ನು ಅಮೆರಿಕದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯು ಆಯ್ಕೆ ಮಾಡಿಕೊಂಡಿದೆ" ಎಂದು ಹೇಳಿದರು.
"ಅಮೆರಿಕದಲ್ಲಿ ನೀವು ಫೋನ್ ಖರೀದಿಸಿದಾಗ, ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ 12 ತಿಂಗಳ ಒಪ್ಪಂದವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ಅವರು ಈಗಾಗಲೇ ಅಂತಹ ಒಪ್ಪಂದವನ್ನು ಹೊಂದಿದ್ದಾರೆ. ಅವರು ಅಮೆರಿಕದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರರಲ್ಲೊಬ್ಬರಿಗೆ '5ಜಿ-ಪ್ಲಸ್' ಮೊಬೈಲ್ ಫೋನ್ ಅನ್ನು ವಿನ್ಯಾಸಗೊಳಿಸಿ ತಲುಪಿಸಿದ್ದಾರೆ. ಈ ಫೋನ್ ಈಗಾಗಲೇ ತಯಾರಾಗಿ ಗ್ರಾಹಕರ ಕೈ ಸೇರಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ನಾವು ಈ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದೇವೆ. ಈಗ ಅದು ನಮ್ಮ ಬಳಿ ಲಭ್ಯವಿದೆ" ಎಂದರು.
"ಈಗ ನಾವು ಆ ಸಾಮರ್ಥ್ಯವನ್ನು ಬಳಸಿಕೊಂಡು, ಭಾರತೀಯ ಬ್ರಾಂಡ್, ಭಾರತೀಯ ವಿನ್ಯಾಸ ಮತ್ತು ಭಾರತೀಯ ಬೌದ್ಧಿಕ ಆಸ್ತಿಯನ್ನು (ಐಪಿ) ಭಾರತದಲ್ಲಿಯೇ ಉಳಿಸಿಕೊಳ್ಳುತ್ತೇವೆ. ಅಲ್ಲದೇ, ಆ ಮೊಬೈಲ್ ಫೋನ್ ಅತಿ ಹೆಚ್ಚು ಮಾರಾಟವಾಗುವ ಫೋನ್ಗಳಲ್ಲಿ ಒಂದಾಗಲಿದೆ" ಎಂದು ಅಭಿಪ್ರಾಯಪಟ್ಟರು.