ನವದೆಹಲಿ, ಅ.24 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 29ನೇ ರ್ಯಾಂಕ್ ಪಡೆದ ನಬಿಯಾ ಪರ್ವೇಜ್ ಅವರ ಯಶೋಗಾಥೆ ಇದು.

ನಬಿಯಾ ಅವರು ಉತ್ತರ ಪ್ರದೇಶದ ಬುಲಂದ್ಶಹರ್ನವರು. ನಬಿಯಾ ಅವರು ನವದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಬ್ಯಾಚಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದರು. ತಮ್ಮ ಕಾಲೇಜು ದಿನಗಳಲ್ಲೇ ಅವರು ಸಿವಿಲ್ ಸೇವೆಗೆ ಸೇರುವ ಗುರಿಯನ್ನು ಹೊಂದಿದ್ದರು.
ನಬಿಯಾ ಅವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ 'ರೆಸಿಡೆನ್ಷಿಯಲ್ ಕೋಚಿಂಗ್ ಅಕಾಡೆಮಿ'ಯ ವಿದ್ಯಾರ್ಥಿನಿಯಾಗಿದ್ದು, ಇದು ಅವರ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ನಿರಂತರ ಶ್ರಮ ಮತ್ತು ಸರಿಯಾದ ಮಾರ್ಗದರ್ಶನದಿಂದಾಗಿ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 29ನೇ ರ್ಯಾಂಕ್ ಪಡೆಯುವಲ್ಲಿ ಸಫಲರಾಗುತ್ತಾರೆ.
ಇವರ ಈ ಅತ್ಯುತ್ತಮ ಸಾಧನೆಯು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಸಂಭ್ರಮದ ವಾತಾವರಣ ತಂದಿದೆ. ಬುಲಂದ್ಶಹರ್ನ ದರಿಯಾಪುರ ಜಾಕಾ ಗ್ರಾಮದ ಸಾಮಾನ್ಯ ಕುಟುಂಬವೊಂದಕ್ಕೆ ಸೇರಿದ ನಬಿಯಾ ಅವರ ಈ ಯಶಸ್ಸು, ಸ್ಪಷ್ಟ ಗುರಿ ಮತ್ತು ನಿರಂತರ ಪರಿಶ್ರಮವಿದ್ದರೆ ಯಾವುದೇ ಕನಸೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ.