ಮೈಸೂರು, ಅ.21 (DaijiworldNews/AK): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವಪ್ರಸಿದ್ಧ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಂಬೂ ಸವಾರಿ ಅತ್ಯಂತ ಯಶಸ್ವಿಯಾಗಿ ಹಾಗೂ ಸುಸೂತ್ರವಾಗಿ ಸಂಪನ್ನಗೊಂಡಿದೆ.

ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದರೂ, ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಕ್ಯಾಪ್ಟನ್ ‘ಪ್ರಶಾಂತʼ ಗಾಂಭೀರ್ಯದ ನಡಿಗೆಯೊಂದಿಗೆ ಮೆರವಣಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾನೆ. ಈ ಮೂಲಕ ‘ಜಯಮಾರ್ತಾಂಡ’ ಆನೆಯ ಬಳಿಕ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತ 13ನೇ ಆನೆಯಾಗಿ ಪ್ರಶಾಂತ ಐತಿಹಾಸಿಕ ದಾಖಲೆ ಬರೆದಿದ್ದಾನೆ.
ನಂದಿಧ್ವಜ ಪೂಜೆಯ ನಂತರ ಅರಮನೆಯ ಆವರಣದಲ್ಲಿ ಶುಭ ಮೀನಾ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂಭ್ರಮದ ಕ್ಷಣಕ್ಕೆ ಸಿಎಂ ಪತ್ನಿ ಉಷಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಾಕ್ಷಿಯಾದರು.
ಇದೇ ಮೊದಲ ಬಾರಿಗೆ ಹೊರರಾಜ್ಯದ ಗಣ್ಯರಾದ ಕೇರಳ ಮುಖ್ಯಮಂತ್ರಿ ಸತೀಶನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡಿದ್ದು ಈ ಬಾರಿಯ ದಸರಾದ ವಿಶೇಷವಾಗಿತ್ತು.