ಮೈಸೂರು, ಅ.21 (DaijiworldNews/AK): ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಮುಖ್ಯಮಂತ್ರಿ ಚಾಲನೆ ನೀಡಿರುವ ಸಿಎಂ ಡಿಕೆ ಶಿವಕುಮಾರ್ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ.

ಮೈಸೂರು ಪೇಟ ಧರಿಸಿ ಗಮನ ಸೆಳೆದ ಸಿಎಂ ಡಿ.ಕೆ ಶಿವಕುಮಾರ್, ತಮಗಾಗಿ ತಂದಿದ್ದ ಹೂವಿನ ಹಾರವನ್ನ ಧರಿಸಲು ನಿರಾಕರಿಸಿದರು. ಬದಲಾಗಿ, ತಮಗೆ ತಂದಿದ್ದ ಹಾರವನ್ನ ನಂದಿಧ್ವಜಕ್ಕೆ ಹಾಕಿಸುವಂತೆ ಸೂಚಿಸಿದರು. ಇದೇ ವೇಳೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಇನ್ನೂ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನ್ನ ಮರೆಯಲಾಗದ ದಿನ ಇವತ್ತು. ತಾಯಿ ಚಾಮುಂಡಿ ಆಶೀರ್ವಾದದಿಂದ ನನಗೆ ಅವಕಾಶ ಸಿಕ್ಕಿದೆ, ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ – ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಹೊಸ ಆನೆ ಮೇಲೆ ತಾಯಿ ಚಾಮುಂಡಿ ಮೆರವಣಿಗೆ ಸಾಗಲಿದೆ, ಲಕ್ಷಾಂತರ ಜನ ಈ ದಸರಾ ನೋಡಿದ್ದಾರೆ. ಈ ದಸರೆಯಿಂದ ದ್ವೇಷ ದೂರವಾಗಲಿ. ಸಾಮರಸ್ಯ ನಿರ್ಮಾಣ ಆಗಲಿ, ಅನ್ಯಾಯ ಅಳಿಯಬೇಕು. ರಾಜ್ಯದಲ್ಲಿ ಪ್ರತಿ ವ್ಯವಸ್ಥೆಯಲ್ಲಿ ಅನ್ಯಾಯವಿದೆ, ಈ ಅನ್ಯಾಯ ದೂರವಾಗಬೇಕು. ಯುವಕರ ಭವಿಷ್ಯ ಬೆಳಗಬೇಕು. ಎಲ್ಲದಕ್ಕೂ ತಾಯಿ ಕೃಪೆ ಇರಬೇಕು ಎಂದು ಪ್ರಾರ್ಥಿಸಿದರು.
ದಸರಾ ಜಂಬೂ ಸವಾರಿಯಲ್ಲಿ 12 ಆನೆಗಳು ಭಾಗಿಯಾಗಲಿದ್ದು, ಕ್ಯಾಪ್ಟನ್ ಪ್ರಶಾಂತ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಪ್ರಶಾಂತನಿಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಲಿವೆ. ನೌಪತ್ ಆನೆಯಾಗಿ ಗೋಪಿ ಹಾಗೂ ನಿಶಾನೆ ಆನೆಯಾಗಿ ಅಭಿಮನ್ಯು, ಪಟ್ಟದ ಆನೆಯಾಗಿ ಶ್ರೀಕಂಠ, ಸಾಲಾನೆಗಳಾಗಿ ಮಹೇಂದ್ರ, ಶ್ರೀರಾಮ, ಧನಂಜಯ, ಲಕ್ಷ್ಮೀ, ಸುಗ್ರೀವ, ಏಕಲವ್ಯ ಮೆರವಣಿಗೆಯಲ್ಲಿ ಸಾಗಲಿವೆ. 18 ಬಾರಿ ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಪ್ರಶಾಂತ ಆನೆಗೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿದೆ. 6 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿದೆ.