ನವದೆಹಲಿ, ಅ.19 (DaijiworldNews/AK): ಭಾರತದ ಶತ್ರುಗಳನ್ನು ಗುರುತಿಸಿ ಅವರನ್ನು ಸದೆಬಡಿಯಲು ದೇಶದ ಜನರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೆಹಲಿಯ ಐಪಿ ಎಕ್ಸ್ಟೆನ್ಷನ್ ಉತ್ಸವ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅದ್ಧೂರಿ ವಿಜಯದಶಮಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ, ಶತಮಾನಗಳ ವಿದೇಶಿ ಆಕ್ರಮಣಗಳು ಮತ್ತು ಶೋಷಣೆಗಳ ಕರಾಳ ದಿನಗಳಿಂದ ಹೊರಬಂದು ಭಾರತವೀಗ ತನ್ನ ನೈಜ ಅಸ್ಮಿತೆಯನ್ನು ಮರಳಿ ಪಡೆಯುತ್ತಿದೆ ಎಂದು ಹೆಮ್ಮೆಯಿಂದ ನುಡಿದರು. ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಅವರು, ಈ ಹಬ್ಬವು ಅಧರ್ಮದ ಮೇಲೆ ಧರ್ಮದ, ಅಸತ್ಯದ ಮೇಲೆ ಸತ್ಯದ ವಿಜಯವನ್ನು ಸಾರುತ್ತದೆ ಎಂದರು.
ನಮ್ಮ ಆಲೋಚನೆಗಳು ಸಾಮರಸ್ಯದಿಂದ ಕೂಡಿರಲಿ, ದೇಶದ ಎಲ್ಲಾ ಸಂಸ್ಥೆಗಳು ಹಾಗೂ ಪ್ರತಿಯೊಂದು ರಾಜಕೀಯ ಪಕ್ಷಗಳೂ ರಾಷ್ಟ್ರದ ಹಿತದೃಷ್ಟಿಯಿಂದ ಒಗ್ಗೂಡಿ ನಿಲ್ಲಲಿ. ದೇಶದ ಶತ್ರುಗಳನ್ನು ಎದುರಿಸಲು ನಾವೆಲ್ಲರೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು. ದೇಶದ ಗೌರವಕ್ಕೆ ಧಕ್ಕೆ ತರಲು ಯತ್ನಿಸುವವರು, ಸಮಾಜವನ್ನು ವಿಭಜಿಸುವವರು ಹಾಗೂ ನಮ್ಮ ಸಂಸ್ಕೃತಿಯನ್ನು ದ್ವೇಷಿಸುವವರೇ ಈ ದೇಶದ ನಿಜವಾದ ಶತ್ರುಗಳು ಎಂದು ನೇರವಾಗಿ ಎಚ್ಚರಿಕೆ ನೀಡಿದರು.