ಕೊಲ್ಲಂ, ಅ.20 (DaijiworldNews/TA): ಕೇರಳದ ಕೊಲ್ಲಂ ಜಿಲ್ಲೆಯ ನೆಡುಂಬನದಲ್ಲಿ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ತಾಯಿ ಮತ್ತು ಐದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ತಾಯಿ ಶ್ರೀದೇವಿ (28) ಮತ್ತು ಅವರ ಪುತ್ರ ಆದಿದೇವ್ (5) ಅವರ ದೇಹದ ವಿವಿಧ ಭಾಗಗಳಿಗೆ ಸುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ SAT ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಡುಂಬನ ಪಂಚಾಯತ್ನ ಸಸ್ತಂಪೋಯ್ಕಾ ಸಮೀಪದ ಉಗ್ರಂಕುನ್ನು ಪ್ರದೇಶದಲ್ಲಿರುವ ಅಜಿತ್ ಭವನದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಶ್ರೀದೇವಿ, ಅವರ ಪುತ್ರ ಆದಿದೇವ್, ಇತರ ಇಬ್ಬರು ಮಕ್ಕಳು ಹಾಗೂ ಅತ್ತೆ ನಂದಿನಿ ಮನೆಯ ಮುಂಭಾಗದ ಕೋಣೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಶ್ರೀದೇವಿ ಮತ್ತು ಆದಿದೇವ್ ಅಡುಗೆ ಮನೆಗೆ ತೆರಳಿದ್ದಾರೆ. ಆಗ ಏಕಾಏಕಿ ಬಲವಾದ ಗುಡುಗು ಸಹಿತ ಮಿಂಚು ಸಂಭವಿಸಿದ್ದು, ತಾಯಿ ಮತ್ತು ಮಗುವಿಗೆ ಸಿಡಿಲು ಬಡಿದಿದೆ ಎಂದು ವರದಿಯಾಗಿದೆ. ಇಬ್ಬರ ಕಿರುಚಾಟ ಕೇಳಿ ಮನೆಯಲ್ಲಿದ್ದವರು ಅಡುಗೆ ಮನೆಗೆ ಧಾವಿಸಿದಾಗ, ತಾಯಿ ಮತ್ತು ಮಗು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಶಬ್ದ ಕೇಳಿ ನೆರೆಹೊರೆಯವರೂ ಸ್ಥಳಕ್ಕೆ ಆಗಮಿಸಿದ್ದಾರೆ.
ತಕ್ಷಣವೇ ಗಾಯಾಳುಗಳನ್ನು ನೆಡುಂಬನ ಟಿಬಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಪರಿಪಳ್ಳಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಗುವಿನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ SAT ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು.
ಸಿಡಿಲಿನ ತೀವ್ರತೆಗೆ ಮನೆಯ ಗೋಡೆ ಹಾಗೂ ಬಾವಿಗೆ ಹಾನಿಯಾಗಿದೆ. ಮನೆಯ ಸ್ವಿಚ್ಬೋರ್ಡ್ಗಳು ಸ್ಫೋಟಗೊಂಡಿದ್ದು, ವಿದ್ಯುತ್ ತಂತಿಗಳೂ ಸುಟ್ಟುಹೋಗಿವೆ ಎಂದು ವರದಿಯಾಗಿದೆ. ಘಟನೆ ನಡೆದ ಉಗ್ರಂಕುನ್ನು ಪ್ರದೇಶದಲ್ಲಿ ಮಧ್ಯಾಹ್ನ 12.30ರಿಂದ ಭಾರೀ ಮಳೆಯಾಗುತ್ತಿತ್ತು. ಮಳೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಬಲವಾದ ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆಯೂ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ನಡೆದಿತ್ತು ಎನ್ನಲಾಗಿದೆ.