ಮುಂಬೈ, ಅ.20 (DaijiworldNews/TA): ಮುಂಬೈನ ಕುರ್ಲಾ ಪಶ್ಚಿಮದಲ್ಲಿರುವ 13 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ವಿದ್ಯುತ್ ವೈರಿಂಗ್ ಮೂಲಕ ಬೆಂಕಿ ಹರಡಿ ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿಕೊಂಡ ಪರಿಣಾಮ ಎಂಟು ಮಂದಿ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುರ್ಲಾದ ಕೊಹಿನೂರ್ ಎಚ್ಡಿಐಎಲ್ ಕಟ್ಟಡ ಸಂಖ್ಯೆ 5ರಲ್ಲಿ ಬೆಳಗ್ಗೆ 6.53ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಕಟ್ಟಡದಲ್ಲಿ ಹೊಗೆ ಹರಡಿದ್ದು, ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಗಾಯಗೊಂಡವರಲ್ಲಿ ಐದು ವರ್ಷದ ಬಾಲಕ, ಇಬ್ಬರು ಹದಿಹರೆಯದ ಬಾಲಕಿಯರು ಹಾಗೂ ಹಿರಿಯ ನಾಗರಿಕರೂ ಸೇರಿದ್ದಾರೆ. ಎಲ್ಲ ಗಾಯಾಳುಗಳನ್ನು ಘಾಟ್ಕೋಪರ್ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಅಗ್ನಿ ಅವಘಡದ ಮಾಹಿತಿ ಲಭಿಸುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸರು, 108 ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಸ್ಥಳೀಯ ವಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಬೆಳಗ್ಗೆ 7.21ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಪ್ರಾಥಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅವಘಡದ ನಿಖರ ಕಾರಣ ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಟ್ಟಡದ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಆಸ್ತಿ ಹಾನಿಯ ಪ್ರಮಾಣದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮುಂಬೈ ಮಹಾನಗರ ಪ್ರದೇಶದಲ್ಲಿ ವಸತಿ ಕಟ್ಟಡಗಳಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳು ಆತಂಕಕ್ಕೆ ಕಾರಣವಾಗಿವೆ. ಈ ತಿಂಗಳ ಆರಂಭದಲ್ಲಿ ನಲ್ಲಸೋಪರಾ-ವಸಾಯಿ ಲಿಂಕ್ ರಸ್ತೆಯಲ್ಲಿರುವ ‘ಇಂಪೀರಿಯಲ್ ಹೈಟ್ಸ್’ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಫಾಲ್ಗುಣಿ ಶಾ ಮತ್ತು ಅಶ್ವಿನಿ ಪಾರ್ಕರ್ ಎಂಬ ಇಬ್ಬರು ಮಹಿಳೆಯರು ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದರು. ಕಟ್ಟಡದ 14ನೇ ಮಹಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಕ್ರೇನ್ ಮೂಲಕ ರಕ್ಷಿಸಲಾಗಿತ್ತು.