ಐಜ್ವಾಲ್, ಅ.20 (DaijiworldNews/AA): ಮಿಜೋರಾಂನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 8.64 ಕೋಟಿ ರೂ. ಮೌಲ್ಯದ 43.2 ಲಕ್ಷ ವಿದೇಶಿ ಮೂಲದ ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಮ್ಯಾನ್ಮಾರ್ ಗಡಿಯಿಂದ ರಾಜಧಾನಿ ಐಜ್ವಾಲ್ಗೆ ಬೃಹತ್ ಪ್ರಮಾಣದಲ್ಲಿ ವಿದೇಶಿ ಸರಕು ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳೆಗೆ ದೊರೆತ್ತಿತ್ತು. ಈ ಹಿನ್ನೆಲೆ ಡಿಆರ್ಐ ಐಜ್ವಾಲ್ ಪ್ರಾದೇಶಿಕ ಘಟಕದ ಅಧಿಕಾರಿಗಳು ಚಂಫೈ-ಐಜ್ವಾಲ್ ಹೆದ್ದಾರಿಯ ಉದ್ದಕ್ಕೂ ನಿಗಾ ಇರಿಸಿ, ತುಯಿರಿಯಲ್ ಗ್ರಾಮದ ಬಳಿ ಶಂಕಿತ ಟ್ರಕ್ ಅನ್ನು ತಡೆಹಿಡಿದಿದ್ದಾರೆ.
ತಪಾಸಣೆ ವೇಳೆ ಲಾರಿಯಲ್ಲಿ ಪ್ಯಾಟ್ರನ್ ಬ್ರ್ಯಾಂಡ್ನ 43,20,000 ವಿದೇಶಿ ಸಿಗರೇಟ್ ಕಡ್ಡಿಗಳಿದ್ದ ಒಟ್ಟು 432 ಬೃಹತ್ ಬಾಕ್ಸ್ಗಳು ಪತ್ತೆಯಾಗಿವೆ. ಭಾರತೀಯ ತಂಬಾಕು ನಿಯಂತ್ರಣ ಕಾಯ್ದೆ (COTPA 2003) ಅಡಿಯಲ್ಲಿ ಕಡ್ಡಾಯವಾಗಿರಬೇಕಾದ ಚಿತ್ರಾತ್ಮಕ ಆರೋಗ್ಯ ಎಚ್ಚರಿಕೆಗಳು ಈ ಪ್ಯಾಕೆಟ್ಗಳಲ್ಲಿ ಇರಲಿಲ್ಲ.
1962 ರ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110 ರ ಅಡಿಯಲ್ಲಿ 8.64 ಕೋಟಿ ರೂ. ಮೌಲ್ಯದ ಸಿಗರೇಟ್ ಹಾಗೂ ಸಾಗಣೆಗೆ ಬಳಸಿದ ಟ್ರಕ್ ಅನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಲಾರಿ ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.