ನವದೆಹಲಿ, ಅ.19 (DaijiworldNews/AK): ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಂದು (ಅಕ್ಟೋಬರ್ 19) 2 ದಿನಗಳ ಕಾಲ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಇಬ್ಬರೂ ನಾಯಕರ ಕಸ್ಟಡಿಯನ್ನು 5 ದಿನಗಳ ಕಾಲ ವಿಸ್ತರಿಸುವಂತೆ ಕೋರಿದ್ದರು. ಈ ಮೊದಲು, ಕಸ್ಟಡಿ ವಿಸ್ತರಣೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಮನವಿಯ ಮೇಲಿನ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ಇದೇ ವೇಳೆ, ಇಬ್ಬರೂ ನಾಯಕರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅದರ ತೀರ್ಪನ್ನೂ ಕಾಯ್ದಿರಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದ್ದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಆರಂಭದಲ್ಲಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು
ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಅಕ್ಟೋಬರ್ 13ರ ಬೆಳಿಗ್ಗೆ ಸೌರವ್ ದಾಸ್, ಅಶುತೋಷ್ ರಾಂಕಾ, ಅಜಿಂಕ್ಯ ಶಿಂದೆ ಮತ್ತು ಸಿಜೆಪಿಯ ಇತರ 11 ಸದಸ್ಯರು ಖಾಸಗಿ ಆಸ್ತಿಯ ಮೂಲಕ ಜಂತರ್ ಮಂತರ್ ತಲುಪಿದ್ದರು. ಜಂತರ್ ಮಂತರ್ ಅನ್ನು ನಿಗದಿತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಈಗಾಗಲೇ ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.