ನವದೆಹಲಿ, ಅ.19 (DaijiworldNews/AK): ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಸೋಮವಾರ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಎದೆಯ ಸೋಂಕಿನ ಸಮಸ್ಯೆಯಿಂದಾಗಿ 98 ವರ್ಷದ ಅಡ್ವಾಣಿ ಅವರು ಅಕ್ಟೋಬರ್ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ವಿನೀತ್ ಸೂರಿ ಅವರ ನೇತೃತ್ವದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಆರಂಭದಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿರಂತರ ನಿಗಾದಲ್ಲಿದ್ದರು. ಮೂಲಗಳ ಪ್ರಕಾರ ಅವರು ಶುಕ್ರವಾರ ಸಂಜೆ ಸುಮಾರು 7:30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.
ಲಾಲ್ ಕೃಷ್ಣ ಅಡ್ವಾಣಿ ಅವರು ಹಲವು ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 2002 ರಿಂದ 2004 ರವರೆಗೆ ದೇಶದ ಉಪ ಪ್ರಧಾನಿಯಾಗಿದ್ದರು. ಬಿಜೆಪಿಯನ್ನು ರಾಷ್ಟ್ರಮಟ್ಟದ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.