ಶಿವಮೊಗ್ಗ, ಅ.19 (DaijiworldNews/TA) : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರಿಗೆ ದೂರು ನೀಡಿದ್ದಾರೆ. ಇಬ್ಬರು ವ್ಯಕ್ತಿಗಳು ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಅಕ್ಟೋಬರ್ 17ರಂದು ರಾತ್ರಿ 8.49ಕ್ಕೆ ರಿಜ್ವಾನ್ ಬೇಗ್ ಎಂಬಾತ ಕರೆ ಮಾಡಿದ್ದರೆ, ಅದೇ ರಾತ್ರಿ 10.49ಕ್ಕೆ ಫರಾನ್ ರಶೀದ್ ಎಂಬಾತನಿಂದ ಮತ್ತೊಂದು ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಕರೆಗಳಿಂದ ತಮಗೆ ಹಾಗೂ ಕುಟುಂಬದವರಿಗೆ ಆತಂಕ ಎದುರಾಗಿದೆ ಎಂದು ತಿಳಿಸಿರುವ ಈಶ್ವರಪ್ಪ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ತಮಗೆ ಮತ್ತು ಕುಟುಂಬದವರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕೆಂದೂ ಕೋರಿದ್ದಾರೆ.
ಬೆದರಿಕೆ ಕರೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಮೊದಲ ಕರೆ ಬಂದಾಗ ತಾವು ಕುಟುಂಬದವರೊಂದಿಗೆ ಚಿತ್ರಮಂದಿರದಲ್ಲಿದ್ದುದಾಗಿ ತಿಳಿಸಿದ್ದಾರೆ. “ಮೊದಲ ಕರೆ ಮಾಡಿದ ವ್ಯಕ್ತಿ, ‘ನೀವು ಕೆ.ಎಸ್. ಈಶ್ವರಪ್ಪನಾ?’ ಎಂದು ಕೇಳಿದ. ಅದಕ್ಕೆ ನಾನು ಹೌದು ಎಂದು ಉತ್ತರಿಸಿದೆ. ಬಳಿಕ ಆತ ಏನೇನೋ ಮಾತನಾಡುತ್ತಿದ್ದ. ವಿಷಯವೇನು ಎಂದು ಕೇಳಿ, ಪೊಲೀಸ್ ದೂರು ನೀಡುವುದಾಗಿ ತಿಳಿಸಿದೆ. ಅದಕ್ಕೆ ಆತ, ‘ಪರವಾಗಿಲ್ಲ, ದೂರು ಕೊಡಿ’ ಎಂದಿದ್ದಾನೆ” ಎಂದು ಈಶ್ವರಪ್ಪ ವಿವರಿಸಿದ್ದಾರೆ. ಮೊದಲ ಕರೆ ಮಾಡಿದ ವ್ಯಕ್ತಿಯೊಂದಿಗೆ ತಾವೂ ಸ್ವಲ್ಪ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಿದ್ದಾಗಿ ತಿಳಿಸಿದ ಅವರು, ಮತ್ತೆ ಕರೆ ಮಾಡುವುದಾಗಿ ಆತ ಹೇಳಿದ್ದರೂ ಈವರೆಗೆ ಮರಳಿ ಕರೆ ಮಾಡಿಲ್ಲ ಎಂದಿದ್ದಾರೆ.
ಎರಡನೇ ಕರೆ ಮಾಡಿದ ವ್ಯಕ್ತಿ ಸಚಿವ ಜಮೀರ್ ಅಹ್ಮದ್ ಕುರಿತು ತಾವು ಈ ಹಿಂದೆ ಮಾತನಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಹಿಂದೆಯೂ ತಮಗೆ ಬೆದರಿಕೆ ಕರೆಗಳು ಬಂದಿದ್ದು, ಆ ಸಂದರ್ಭದಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ, ಹಿಂದಿನ ಕರೆಗಳು ವಿದೇಶಗಳಿಂದ ಬಂದಿದ್ದವು. ಈಗ ಕರೆ ಮಾಡಿದವರು ಭಾರತದಲ್ಲೇ ಇರುವವರಿರಬಹುದು ಎಂಬ ಅನುಮಾನವಿದೆ ಎಂದು ಅವರು ಹೇಳಿದ್ದಾರೆ. ಎರಡು ಬೆದರಿಕೆ ಕರೆಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ ಈಶ್ವರಪ್ಪ, ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದಿದ್ದಾರೆ. ತಮಗೆ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸುವುದರ ಜೊತೆಗೆ, ಕರೆ ಮಾಡಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.