ಕೋಟಾ, ಅ.19 (DaijiworldNews/AA): ಬಾಲಿವುಡ್ನ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾ ನಗರದಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗುಂಡಿನ ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ 17, 18 ಹಾಗೂ 22 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನ 'ಆಂಟಿ-ಗ್ಯಾಂಗ್ಸ್ಟರ್ ಟಾಸ್ಕ್ ಫೋರ್ಸ್' ಮತ್ತು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮುಂಬೈನಿಂದ ದೆಹಲಿ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪಿಗಳು, ವಸಾಯಿಯಲ್ಲಿ ರೈಲು ಹತ್ತಿದ್ದರು. ರೈಲು ಕೋಟಾ ನಿಲ್ದಾಣಕ್ಕೆ ಬಂದಾಗ ಈ ಮೂವರು ಆರೋಪಿಗಳನ್ನ ತಡೆಹಿಡಿದು ಬಂಧಿಸಲಾಗಿದೆ.
ಮುಂಬೈ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಿದ ವಿಶೇಷ ತಂಡವು ರಾಜಸ್ಥಾನದ ಕೋಟಾದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪ್ರಕರಣದ ತನಿಖೆ ಮುಂದುವರೆದಿದೆ.
ನಟ ಟೈಗರ್ ಶ್ರಾಫ್ ಮುಂಬೈನ ಜುಹು ಪ್ರದೇಶದಲ್ಲಿ ಅ. 18ರ ಸಂಜೆ ಫುಟ್ಬಾಲ್ ಮೈದಾನದಿಂದ ತಮ್ಮ ಕಾರಿನಲ್ಲಿ ಹೊರಟಿದ್ದರು. ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.