ಬೆರ್ಹಾಂಪುರ್, ಅ.19 (DaijiworldNews/AA): ವಾರದ ಹಿಂದಷ್ಟೇ ಒಡಿಶಾದ ಆಸ್ಪತ್ರೆಯೊಂದರಲ್ಲಿ ಎರಡು ಪ್ರತ್ಯೇಕ ತಲೆಗಳು ಹಾಗೂ ಒಂದೇ ದೇಹದೊಂದಿಗೆ ಜನಿಸಿದ್ದ ಸಯಾಮಿ ಅವಳಿ ಗಂಡು ಶಿಶುಗಳು ಮೃತಪಟ್ಟಿವೆ.

ಕಂಧಮಾಲ್ ಜಿಲ್ಲೆಯ ತುಮುಡಿಬಂಧ ವ್ಯಾಪ್ತಿಯ ದಿನಗೂಲಿ ಕಾರ್ಮಿಕ ದಂಪತಿಗೆ ಅಕ್ಟೋಬರ್ 11 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಈ ಅಪರೂಪದ ಶಿಶು ಜನಿಸಿತ್ತು. ಇದು ಆ ತಾಯಿಯ ಮೊದಲ ಗರ್ಭಧಾರಣೆಯಾಗಿತ್ತು.
ಈ ಸಯಾಮಿ ಅವಳಿಗಳಿಗೆ ಎರಡು ಪ್ರತ್ಯೇಕ ತಲೆಗಳು ಮತ್ತು ಎರಡು ಬೆನ್ನುಹುರಿಗಳು, ಒಂದೇ ಹೃದಯ, ಒಂದೇ ಯಕೃತ್ತು ಹಾಗೂ ಒಂದೇ ದೇಹ ಹೊಂದಿದ್ದವು. ಜೊತೆಗೆ ಒಂದು ಜೋಡಿ ಕೈ ಮತ್ತು ಕಾಲುಗಳಿದ್ದವು. ಜನನದ ವೇಳೆ ಶಿಶು 2.25 ಕೆಜಿ ತೂಕವಿತ್ತು.
ಈ ಅವಳಿಗಳ ಅಂಗಾಗಗಳನ್ನು ಬೇರ್ಪಡಿಸುವ ಅಥವಾ ಜೀವ ಉಳಿಸುವ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದರು. ಆದರೆ ಮಗು ಜನಿಸಿದ ಮರುದಿನವೇ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಅಸಾಧ್ಯವಾಗಿತ್ತು. ಅತ್ಯಂತ ಅಪರೂಪದ ದೈಹಿಕ ರಚನೆ ಹೊಂದಿದ್ದ ಶಿಶು ಶನಿವಾರ ಸಾವನ್ನಪ್ಪಿದೆ.
ಕುಟುಂಬದವರು ಮಗು ಸಾವನ್ನಪ್ಪಿದ ಬಳಿಕ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ಯಲು ನಿರಾಕರಿಸಿದ್ದರು. ನಂತರ ಗಂಜಾಂ ಜಿಲ್ಲಾಡಳಿತ ಮತ್ತು ಆಸ್ಪತ್ರೆಯ ಅಧಿಕಾರಿಗಳು ದಂಪತಿಗೆ ಕೌನ್ಸೆಲಿಂಗ್ ನಡೆಸಿ ಮನವೊಲಿಸಿ, ಸರ್ಕಾರಿ ಶವವಾಹನದ ಮೂಲಕ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿಕೊಟ್ಟರು.