ಮೈಸೂರು, ಅ.18 (DaijiworldNews/TA): ವಿಶ್ವವಿಖ್ಯಾತ ಮೈಸೂರು ದಸರಾ 2026ರ ವಿಶೇಷ ಆಕರ್ಷಣೆಯಾಗಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ಇಂದಿನಿಂದ ಚಾಲನೆ ಸಿಗಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಕಂಬಳಕ್ಕೆ ಸಿದ್ಧತೆಗಳು ನಡೆದಿದ್ದು, ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆ ಮಹತ್ವ ಪಡೆದುಕೊಂಡಿದೆ.

ಕಂಬಳದ ವೇಳೆ ಕೋಣಗಳಿಗೆ ಯಾವುದೇ ರೀತಿಯ ಹಿಂಸೆ, ನೋವು ಅಥವಾ ಚಾಟಿ ಏಟು ನೀಡದಂತೆ ಕಾರ್ಯಕ್ರಮ ನಡೆಸುವುದು ಕಡ್ಡಾಯವಾಗಿದೆ. ಪ್ರಾಣಿಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಲಾಗಿದೆ. ಕಂಬಳ ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ, ಕಂಬಳ ಆಯೋಜನೆಗೆ ಏಳು ದಿನಗಳ ಮುಂಚಿತವಾಗಿ ಅಗತ್ಯ ಅಧಿಸೂಚನೆ ಸಲ್ಲಿಸಬೇಕು ಎಂಬ ನಿರ್ದೇಶನವೂ ಇದೆ. ಆದರೆ, ಈ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಇದೀಗ ಪ್ರಶ್ನೆಗಳು ಎದ್ದಿವೆ. ಸುಪ್ರೀಂ ಕೋರ್ಟ್ನ ನಿರ್ದೇಶನಗಳ ಅನುಸಾರವೇ ಕಂಬಳ ಆಯೋಜಿಸಲಾಗಿದೆಯೇ ಎಂಬುದು ಚರ್ಚೆಗೆ ಕಾರಣವಾಗಿದೆ.
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳವನ್ನು ಆಯೋಜಿಸುವ ನಿರ್ಧಾರ ಪ್ರಕಟವಾದಾಗಿನಿಂದಲೇ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ದಸರಾ ಮಹೋತ್ಸವದಲ್ಲಿ ಕಂಬಳದ ಅಗತ್ಯವೇನು ಎಂಬ ಪ್ರಶ್ನೆಗಳೂ ಕೇಳಿಬಂದಿದ್ದವು. ಇದೀಗ ಕಾರ್ಯಕ್ರಮ ಆರಂಭವಾಗುತ್ತಿರುವ ಬೆನ್ನಲ್ಲೇ, ಪ್ರಾಣಿಗಳ ಸುರಕ್ಷತೆ ಮತ್ತು ನ್ಯಾಯಾಲಯದ ಮಾರ್ಗಸೂಚಿಗಳ ಪಾಲನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಸ್ಪಷ್ಟನೆ ಕೋರಿ ಡಿವೈಎಸ್ಪಿಗೆ ಪತ್ರ ಬರೆದಿದ್ದಾರೆ. ಕಂಬಳ ಆಯೋಜನೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಮತ್ತು ಪ್ರಾಣಿಗಳ ಮೇಲೆ ಯಾವುದೇ ರೀತಿಯ ಹಿಂಸೆ ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಮೈಸೂರು ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳವು ಯಶಸ್ವಿಯಾಗಿ ಮುಕ್ತಾಯಗೊಳ್ಳುವುದರ ಜೊತೆಗೆ, ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.