ಕೋಲ್ಕತ್ತಾ, ಅ.18 (DaijiworldNews/AA): ಉತ್ತರ ಕೋಲ್ಕತ್ತಾದ ಚೋರ್ಬಗಾನ್ನ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಬಂಗಾಳ ಪೊಲೀಸರು ದುರ್ಗಾ ಪೂಜಾ ಪೆಂಡಾಲ್ನ ಆಯೋಜಕರು ಸೇರಿದಂತೆ ಏಳು ಮಂದಿಯನ್ನ ಬಂಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಪಾರ್ಕ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 105, 110 ಮತ್ತು 3(5) ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ 7 ಮಂದಿಯನ್ನ ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ದುರಂತಕ್ಕೆ ನಿಖರ ಕಾರಣವೇನು ಅನ್ನೋದನ್ನ ಪತ್ತೆಹಚ್ಚಲು ವಿಚಾರಣೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೂ ತಡರಾತ್ರಿ ಘಟನಾ ಸ್ಥಳಕ್ಕೆ ಹಾಗೂ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಮತ್ತು 'ಗ್ರೂಪ್ ಡಿ' ಶ್ರೇಣಿಯ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಇದರೊಂದಿಗೆ ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನ ಸರ್ಕಾರವೇ ಭರಿಸಲಿದೆ. ಜೊತೆಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಮುಂದುವರೆದು, "ಇದು ಅತ್ಯಂತ ದುರದೃಷ್ಟಕರ ಘಟನೆ. 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ 17 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 25 ಮಂದಿ ಗಾಯಗೊಂಡಿದ್ದು, ಅವರಲ್ಲಿ 24 ಮಂದಿ ಅಪಾಯದಿಂದ ಪಾರಾಗಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಸಂತ್ರಸ್ತ ಕುಟುಂಬಗಳ 13 ಸದಸ್ಯರು ನನ್ನನ್ನು ಭೇಟಿಯಾಗಿ, ಸರ್ಕಾರದ ಮೇಲೆ ತಮಗಿರುವ ನಂಬಿಕೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವರ ನಿಗದಿತ ಕಾರ್ಯಕ್ರಮಗಳನ್ನ ರದ್ದುಗೊಳಿಸಲಾಗಿದೆ. ನಾವು ಸಂತ್ರಸ್ತ ಕುಟುಂಬಗಳೊಂದಿಗೆ ಇದ್ದೇವೆ" ಎಂದು ಭರವಸೆ ನೀಡಿದ್ದಾರೆ.