ಗದಗ, ಅ.17 (DaijiworldNews/AK): ದೇಶದಲ್ಲಿ ಸ್ಟಿಂಗ್ ಆಪರೇಷನ್ನ ಪಿತಾಮಹ ಎಂದು ಯಾರನ್ನಾದರೂ ಕರೆಯುವುದಾದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ದಸರಾ ಬಳಿಕ ಜೆಡಿಎಸ್ ಹೋರಾಟ ನಡೆಸುವ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ ಎಂದರು. ಸಿಜೆಪಿ ಪ್ರತಿಭಟನೆಗೂ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸಿಜೆಪಿ ಹೋರಾಟಕ್ಕೆ ಕಾಂಗ್ರೆಸ್ ಹಣಕಾಸಿನ ನೆರವು ನೀಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ವೇಳೆ ಬಂಧನವಾದರೆ ವಕೀಲರ ನೆರವು ನೀಡುವುದು, ಧ್ವಜ ಮತ್ತು ಮೈಕ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುವುದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದರು. ಇದನ್ನು ಹಣಕಾಸಿನ ನೆರವು ಎಂದು ಕರೆಯುವ ಬದಲು ‘ಲಾಜಿಸ್ಟಿಕ್ ಸಪೋರ್ಟ್’ ಎಂದು ಪರಿಗಣಿಸಬೇಕು ಎಂದು ಹೇಳಿದರು.