ಹುಬ್ಬಳ್ಳಿ, ಅ.11 (DaijiworldNews/AA): ನಾವು ಕಾನೂನನ್ನು ಮಾನ್ಯ ಮಾಡುವುದಿಲ್ಲ ಎನ್ನುವ ಕಾಂಗ್ರೆಸ್, ದೇಶದಲ್ಲಿ ಎಸ್ಐಆರ್ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ನೋಡುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ದೆಹಲಿಯಲ್ಲಿ ನಿನ್ನೆಯ ಪ್ರತಿಭಟನೆ ನ್ಯಾಯಸಮ್ಮತ ಹೋರಾಟ ಆಗಿರಲಿಲ್ಲ. ಬದಲಿಗೆ ಅರಾಜಕತೆ ಸೃಷ್ಟಿಸಲು ಮಾಡಿದ ಯತ್ನ. ದೇಶದ ಶ್ರೇಷ್ಠ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಮಾದರಿಯಲ್ಲೇ ಎಸ್ಐಆರ್ ನ್ಯಾಯ ಮತ್ತು ಅತ್ಯಂತ ಪಾರದರ್ಶಕ ಪದ್ಧತಿಯಲ್ಲಿ ನಡೆಯುತ್ತಿದೆ. ಹಾಗಿದ್ದರೂ ಇದರ ವಿರುದ್ಧ ಕಾಂಗ್ರೆಸ್, ಸಿಜೆಪಿ ಹೋರಾಟ ನಡೆಸುತ್ತಿರುವುದು ಅರಾಜಕತೆ ತರಲು" ಎಂದು ಆರೋಪ ಮಾಡಿದರು.
"ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವುದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂತೆಯೇ ನಿನ್ನೆ ಅರಾಜಕತೆ ತಡೆಯಲು, ನಿಯಂತ್ರಿಸಲು ಕನಿಷ್ಠ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ" ಎಂದರು.
"ಪ್ರಸ್ತುತ ಎಸ್ಐಆರ್ ಪ್ರಕ್ರಿಯೆ ವೇಳೆ ಸರಿಸುಮಾರು 3 ಕೋಟಿ ಹೆಸರುಗಳು ಮೃತರು ಮತ್ತು 3 ಕೋಟಿ ಹೆಸರುಗಳು ಡಬಲ್ ವೋಟರ್ಸ್ ಹಾಗೂ ನಕಲಿ ವೋಟರ್ಸ್ ಪತ್ತೆ ಹಚ್ಚಲಾಗಿದೆ. ಮತದಾರರ ಪಟ್ಟಿಯಲ್ಲಿ ಇವನ್ನೆಲ್ಲಾ ಸೇರಿಸಬೇಕೇ" ಎಂದು ಪ್ರಶ್ನೆ ಮಾಡಿದರು.
"ಎಸ್ಐಆರ್ನಲ್ಲಿ 13 ಕೋಟಿ ಪತ್ತೆಯಿಲ್ಲದ ಮತದಾರರ ಹೆಸರು ಮರು ಸೇರ್ಪಡೆ ಮಾಡಬೇಕು ಎಂಬುದು ಕಾಂಗ್ರೆಸ್ ಬೇಡಿಕೆಯಾಗಿದೆ. ಆದರೆ, ಇದರಲ್ಲಿ ಮೃತರು, ಸ್ಥಳಾಂತರ ಆದವರು, ನಕಲಿ ಮತದಾರರು, ಅಕ್ರಮ ವಲಸಿಗರು ಹೀಗೆ ಅರ್ಹರಲ್ಲದವರೇ ಇದ್ದಾರೆ. ಇವರನ್ನೆಲ್ಲಾ ಸೇರಿಸಬೇಕಾ? ಒಂದು ವೇಳೆ ಅರ್ಹರಿದ್ದರೆ ಖುದ್ದಾಗಿ ಹಾಜರಾಗಿ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಮುಕ್ತ ಅವಕಾಶ ನೀಡಿದೆ" ಎಂದು ಹೇಳಿದರು.