ಚೆನ್ನೈ, ಅ.11 (DaijiworldNews/AA): ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಜೊತೆ ಕೈಜೋಡಿಸಿ ಕೇಂದ್ರ ಸರ್ಕಾರವು ತಮಿಳುನಾಡಿನ ಅಭಿವೃದ್ಧಿಯನ್ನು ಮುನ್ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಭಾನುವಾರ ಚೆನ್ನೈನಲ್ಲಿ 13,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯಗಳ ನಿರೀಕ್ಷೆಗಳು ಏನೆಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಪ್ರಧಾನಿಯಾದ ನಂತರ ಆ ಆಕಾಂಕ್ಷೆಗಳನ್ನು ಈಡೇರಿಸಲು ಯತ್ನಿಸಿದ್ದು ಮಾತ್ರವಲ್ಲದೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಆಕಾಂಕ್ಷೆಯ ಗುರಿಗಳನ್ನು ತಲುಪಲು ಸಾಧ್ಯವಾಗುವಂತೆ ಶ್ರಮಿಸಿದ್ದೇನೆ" ಎಂದರು.
"2014ರಿಂದ ನಮ್ಮ ಇಲೆಕ್ಟ್ರಾನಿಕ್ಸ್ ರಫ್ತು 11 ಪಟ್ಟು ಹೆಚ್ಚಾಗಿದೆ ಮತ್ತು ಇಂದು ನಾವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ. ನಮ್ಮ ರಕ್ಷಣಾ ರಫ್ತು 50 ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ರಫ್ತು ಕೂಡ ಹೊಸ ದಾಖಲೆಯನ್ನು ಬರೆದಿದೆ. ಉತ್ಪಾದನಾ ಕ್ಷೇತ್ರದಲ್ಲಿನ ಈ ಬೆಳವಣಿಗೆಯಿಂದಾಗಿ ದೇಶದ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ" ಎಂದು ತಿಳಿಸಿದರು.
"ರಾಜ್ಯದ ಕೆಲವು ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ತೂತುಕುಡಿಯಲ್ಲಿರುವ ಚಿದಂಬರನಾರ್ ಬಂದರನ್ನು ಸುಮಾರು 17,000 ಕೋಟಿ ರೂ. ಹೂಡಿಕೆಯೊಂದಿಗೆ ವಿಶ್ವದರ್ಜೆಯ ಮೆಗಾ ಕಂಟೈನರ್ ಮತ್ತು ಹಸಿರು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಈ ಬಂದರು ವಿಶ್ವದ ಬೃಹತ್ ಕಂಟೈನರ್ ಹಡಗುಗಳನ್ನು ಸಾಗಿಸುವ ಸಾಮರ್ಥ್ಯ ಪಡೆಯಲಿದೆ. ಇದು ತಮಿಳುನಾಡನ್ನು ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರದ ಜಾಗತಿಕ ಹಬ್ ಆಗಿ ಮಾರ್ಪಡಿಸಲು ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟರು.
"ಒಬ್ಬ ಮುಖ್ಯಮಂತ್ರಿಯಾಗಿ ನನಗೆ ಕರುಣಾನಿಧಿ ಮತ್ತು ಜಯಲಲಿತಾ ಅವರೊಂದಿಗೆ ಸಂವಾದ ನಡೆಸಲು ಹಲವು ಅವಕಾಶಗಳು ಸಿಕ್ಕಿದ್ದವು. ನಾನು ಪ್ರಧಾನಿಯಾದಾಗ ಜಯಲಲಿತಾ, ಒ. ಪೆನ್ನೀರ್ಸೆಲ್ವಮ್, ಇ. ಪಳನಿಸ್ವಾಮಿ ಮತ್ತು ಎಂ.ಕೆ. ಸ್ಟಾಲಿನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಸರ್ಕಾರಗಳು ಬದಲಾಗಬಹುದು, ಆದರೆ ತಮಿಳುನಾಡಿನ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡುವ ನನ್ನ ಸಂಕಲ್ಪ ಎಂದೆಂದಿಗೂ ಸ್ಥಿರವಾಗಿರುತ್ತದೆ. ನಾವು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ಈ ಪಯಣವನ್ನು ಮುಂದುವರಿಸುತ್ತಿದ್ದೇವೆ" ಎಂದು ಹೇಳಿದರು.