ನವದೆಹಲಿ, ಅ.11 (DaijiworldNews/AA): ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಶನಿವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಈ ವೇಳೆ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಸುಮಾರು 20 ಎಫ್ಐಆರ್ಗಳನ್ನ ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ದಾಖಲಾದ ಈ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕಾರ್ಯನಿರತ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ ಆರೋಪಗಳು ಸೇರಿವೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪ ಸಹ ಕೇಳಿಬಂದಿದೆ. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳದಲ್ಲಿದ್ದ ಹಲವು ಪ್ರತಿಭಟನಾಕಾರರು, ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ 7,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಪ್ರತಿಭಟನೆಗೂ ಮುನ್ನ ಬಂಧಿಸಿದ್ದ ಸಿಜೆಪಿ ಸಂಚಾಲಕ ಅಭಿಜೀತ್ ದಿಪ್ಕೆ, ಸಹ-ಸಂಚಾಲಕ ಸೌರವ್ ದಾಸ್ ಮತ್ತು ವಕ್ತಾರ ಅಶುತೋಷ್ ರಂಕಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ಬೆನ್ನಲ್ಲೇ ದೆಹಲಿ ಪೊಲೀಸರ ದೌರ್ಜನ್ಯದ ವಿರುದ್ಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪತ್ರಕರ್ತ ಹಾಗೂ ಸಿಜೆಪಿ ಮುಖಂಡ ಸೌರವ್ ದಾಸ್, "ವಿಮಾನ ನಿಲ್ದಾಣದಿಂದ ನಮ್ಮನ್ನು ಯಾವುದೇ ಮುನ್ಸೂಚನೆ ಅಥವಾ ವಾರಂಟ್ ನೀಡದೆ ಪೊಲೀಸರು ಬಲವಂತವಾಗಿ ಅಪಹರಿಸಿದ ರೀತಿಯಲ್ಲಿ ಕರೆದೊಯ್ದರು. ನಮ್ಮ ಮೊಬೈಲ್ ಫೋನ್ಗಳನ್ನು ಕಾನೂನುಬಾಹಿರವಾಗಿ ಕಸಿದುಕೊಳ್ಳಲಾಯಿತು. ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಯಾವುದೇ ಅವಕಾಶ ನೀಡಲಿಲ್ಲ. ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ, ನಮ್ಮ ವಕೀಲರನ್ನು ಭೇಟಿ ಮಾಡಲು ಅಥವಾ ಕಾನೂನು ನೆರವು ಪಡೆಯಲು ನಮಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಿದ್ದಾರೆ.