ನವದೆಹಲಿ, ಅ.11 (DaijiworldNews/AA): ರಾಜಧಾನಿ ದೆಹಲಿಯಲ್ಲಿ ಅತ್ಯಗತ್ಯವೆನಿಸಿದನ್ನು ಬಿಟ್ಟು, ಉಳಿದ ಎಲ್ಲಾ ಬ್ಯಾರಿಕೇಡ್ಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಮೆಟ್ರೋ ಮತ್ತು ರೈಲು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು. ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಬಾರದು ಎಂದು ಭಾನುವಾರ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಭಾನುವಾರ ರಜಾದಿನವಾಗಿದ್ದರೂ ಸಿಜೆಪಿ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಶೇಷ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ರಜಾದಿನದ ಪೀಠ ನಡೆಸಿತು.
ವಿಚಾರಣೆ ನಡೆಸಿದ ಕೋರ್ಟ್ ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿರ್ಬಂಧಿಸುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) 2023 ರ ಸೆಕ್ಷನ್ 163 ರ ಅನ್ವಯ ಹೊರಡಿಸಲಾಗಿದ್ದ ನಿರ್ಬಂಧಗಳನ್ನು ಹಿಂಪಡೆಯುವಂತೆ ಪೊಲೀಸರಿಗೆ ನಿರ್ದೇಶಿಸಿತು.
ಸುಪ್ರೀಂ ಕೋರ್ಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 163 ರ ನೋಟಿಸ್ ಅಳವಡಿಸಿರುವುದು ನಮಗೆ ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ಅಥವಾ ಯಾವುದೇ ಇತರ ನ್ಯಾಯಾಲಯಗಳಿಗೆ ಪ್ರವೇಶಿಸಲು ಮತ್ತು ಹೊರಬರಲು ಸಾರ್ವಜನಿಕರಿಗೆ ಯಾವುದೇ ಆತಂಕ ಅಥವಾ ಅಡ್ಡಿ ಉಂಟಾಗದಂತೆ ಆ ನಿರ್ಬಂಧ ಫಲಕಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಪೀಠ ತಿಳಿಸಿತು.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕರ ಮತ್ತು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಮೆಟ್ರೋ ಮತ್ತು ರೈಲು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು. ಯಾವುದೇ ಕಾನೂನುಬಾಹಿರ ಕಾರಣಗಳಿಲ್ಲದೆ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಬಾರದು ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮವಾಗಿ ಬಂಧಿಸಬಾರದು ಎಂದು ಕೋರ್ಟ್ ಆದೇಶಿಸಿತು.