ಧಾರವಾಡ, ಅ.11 (DaijiworldNews/TA): ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರೆನಾಲ್ಟ್ ಡಸ್ಟರ್ ಕಾರೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡ ಹೊರವಲಯದ ಬೈಪಾಸ್ ರಸ್ತೆಯ ಹಳಿಯಾಳ ಸೇತುವೆ ಬಳಿ ನಡೆದಿದೆ. ಕಾರಿನಲ್ಲಿದ್ದವರು ತಕ್ಷಣ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅವೀದ್ ಶೇಖ್ ಅವರಿಗೆ ಸೇರಿದ KA-29-ME-3528 ನೋಂದಣಿ ಸಂಖ್ಯೆಯ ರೆನಾಲ್ಟ್ ಡಸ್ಟರ್ ಕಾರು ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದತ್ತ ತೆರಳುತ್ತಿತ್ತು. ಈ ವೇಳೆ ಧಾರವಾಡ ಬೈಪಾಸ್ ರಸ್ತೆಯ ಹಳಿಯಾಳ ಸೇತುವೆ ಬಳಿ ತಲುಪುತ್ತಿದ್ದಂತೆ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕಾರಿನಲ್ಲಿದ್ದವರು ತಕ್ಷಣ ಎಚ್ಚೆತ್ತುಕೊಂಡು ಕಾರಿನಿಂದ ಕೆಳಗಿಳಿದಿದ್ದಾರೆ. ಅವರು ಹೊರಬಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಾರು ಸಂಪೂರ್ಣವಾಗಿ ಹಾನಿಗೀಡಾಗಿತ್ತು. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.