ಮೈಸೂರು, ಅ.11 (DaijiworldNews/TA): ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಯದುವಂಶದ ಮಹಾರಾಜ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಸರಾ ಸಮಯದಲ್ಲೇ ಕರಾವಳಿಯ ಕಂಬಳವನ್ನು ಆಯೋಜಿಸುವುದರ ಉದ್ದೇಶವೇನು ಎಂದು ಪ್ರಶ್ನಿಸಿರುವ ಅವರು, ಇದು ಮೈಸೂರಿನ ಜನರ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಯದುವೀರ್, ಪ್ರತಿವರ್ಷದಂತೆ ಈ ಬಾರಿಯೂ ದಸರಾ ಆಚರಣೆಗೆ ಸಿದ್ಧತೆಗಳು ನಡೆದಿವೆ. ಆದರೆ ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರ ಸ್ಥಳೀಯವಾಗಿ ವಿರೋಧಕ್ಕೆ ಕಾರಣವಾಗಿದೆ ಎಂದರು. “ಕಂಬಳವನ್ನು ಬೇರೆ ಸಮಯದಲ್ಲಿ ಆಯೋಜಿಸಬಹುದು. ದಸರಾ ಸಂದರ್ಭದಲ್ಲೇ ಯಾಕೆ ಮಾಡಬೇಕು ಎಂಬುದು ಜನರ ಸಹಜ ಪ್ರಶ್ನೆ. ಕರಾವಳಿ ಭಾಗದ ಆಚರಣೆಯನ್ನು ದಸರಾ ಸಂದರ್ಭದಲ್ಲಿ ಇಲ್ಲಿ ತರುವುದರ ಉದ್ದೇಶವೇನು?” ಎಂದು ಅವರು ಪ್ರಶ್ನಿಸಿದರು.
ಕಂಬಳ ಆಯೋಜನೆಯಿಂದ ಕರಾವಳಿ ಮತ್ತು ಮೈಸೂರು ಭಾಗದ ಜನರ ನಡುವೆ ವಿಭಜನೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವನ್ನು ಯದುವೀರ್ ವ್ಯಕ್ತಪಡಿಸಿದರು. ಈ ವಿಚಾರದಿಂದ ಸಮಸ್ಯೆ ಉಂಟಾಗಬಹುದು ಎಂಬುದು ಕಾಂಗ್ರೆಸ್ಗೂ ತಿಳಿದಿದೆ. ಆದರೂ ಉದ್ದೇಶಪೂರ್ವಕವಾಗಿ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಟೀಕಿಸಿದರು.
“ಕರಾವಳಿ ಭಾಗದ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಆದರೆ ದಸರಾ ಸಮಯದಲ್ಲೇ ಕಂಬಳವನ್ನು ಯಾಕೆ ಆಯೋಜಿಸಬೇಕು? ಸ್ಥಳೀಯರು ಮತ್ತು ಹಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಸಂಪ್ರದಾಯಗಳನ್ನು ಇಷ್ಟು ಲಘುವಾಗಿ ಪರಿಗಣಿಸಬಾರದು” ಎಂದು ಹೇಳಿದರು.
ಕಂಬಳವು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಅದರ ಬಗ್ಗೆ ತಮಗೆ ಗೌರವವಿದೆ ಎಂದು ಯದುವೀರ್ ಸ್ಪಷ್ಟಪಡಿಸಿದರು. ಆದರೆ ಒಂದು ಪ್ರದೇಶದ ಸಂಪ್ರದಾಯವನ್ನು ಮತ್ತೊಂದು ಪ್ರದೇಶದ ಪ್ರಮುಖ ಹಬ್ಬದ ಸಂದರ್ಭದಲ್ಲಿ ಆಯೋಜಿಸುವಾಗ ಸ್ಥಳೀಯರ ಭಾವನೆಗಳನ್ನೂ ಪರಿಗಣಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. “ಕಂಬಳ ನಡೆಯುವ ಸಮಯದಲ್ಲಿ ಕರಾವಳಿ ಭಾಗದಲ್ಲಿ ದಸರಾ ಆಚರಣೆಯನ್ನು ಆಯೋಜಿಸಿದರೂ ನಾನು ಅದನ್ನು ವಿರೋಧಿಸುತ್ತೇನೆ. ಎರಡೂ ಪ್ರದೇಶಗಳ ಸಂಪ್ರದಾಯಗಳಿಗೆ ಗೌರವ ನೀಡಬೇಕು” ಎಂದು ಅವರು ಹೇಳಿದರು.
ದಸರಾ ಸಂದರ್ಭದಲ್ಲಿ ನಡೆಯುವ ಇತರ ಕಾರ್ಯಕ್ರಮಗಳ ಕುರಿತು ಮಾತನಾಡಿದ ಯದುವೀರ್, ಸರ್ಕಾರ ತನ್ನ ಆಡಳಿತದ ಸಾಧನೆಗಳನ್ನು ಪ್ರದರ್ಶಿಸುವುದರಲ್ಲಿ ತಪ್ಪಿಲ್ಲ ಎಂದರು. ಈ ಹಿಂದೆ ಕೂಡ ದಸರಾ ಸಂದರ್ಭದಲ್ಲಿ ವಿವಿಧ ವಸ್ತುಪ್ರದರ್ಶನಗಳು ನಡೆದಿವೆ. ಆದರೆ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಅಥವಾ ಸಣ್ಣ ಮಟ್ಟದಲ್ಲಿ ಆಯೋಜಿಸಬೇಕೆಂಬುದನ್ನು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಎಲ್ಲವೂ ಸಕಾರಾತ್ಮಕವಾಗಿ ನಡೆಯಬೇಕಾದರೆ ಜನರ ಬೇಡಿಕೆಗಳು ಮತ್ತು ಅಹವಾಲುಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಅವರು ಹೇಳಿದರು.
ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರ ಇದೀಗ ಮೈಸೂರಿನಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಪ್ರದಾಯಗಳ ಸಂರಕ್ಷಣೆ, ಸ್ಥಳೀಯರ ಭಾವನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ರಾಜಕೀಯ ವಲಯದಲ್ಲೂ ಚರ್ಚೆ ನಡೆಯುತ್ತಿದೆ.