ಚಾಮರಾಜನಗರ, ಅ.10 (DaijiworldNews/AK): ಜಿಲ್ಲೆಯ ವನ್ಯಜೀವಿ ಧಾಮಗಳಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಅರಣ್ಯ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ಸಫಾರಿ ವೇಳೆ ಪ್ರವಾಸಿಗರು, ವಾಹನ ಚಾಲಕರು ಹಾಗೂ ಮಾರ್ಗದರ್ಶಕರು ಮೊಬೈಲ್ ಫೋನ್ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮಾನ್ಯ ಸುಪ್ರೀಂ ಕೋರ್ಟ್ನ ದಿನಾಂಕ 17-11-2025ರ ಆದೇಶದ ಪ್ಯಾರಾ 48.5ರ ಅನ್ವಯ, ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗಗಳ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಫೋನ್ಗಳ ಬಳಕೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ.
ಪ್ರವಾಸಿಗರು, ವಾಹನ ಚಾಲಕರು ಹಾಗೂ ನೇಚರ್ ಗೈಡ್ಗಳು ಸಫಾರಿಗೆ ತೆರಳುವ ಮುನ್ನ ತಮ್ಮ ಮೊಬೈಲ್ ಫೋನ್ಗಳನ್ನು ಸೂಕ್ತ ಸ್ಥಳಗಳಲ್ಲಿ ಇಡಲು ಹಾಗೂ ಸಫಾರಿ ವಾಹನಗಳಲ್ಲಿ ‘Airplane mode’ನಲ್ಲಿ ಬಳಸಲು ವಿಭಾಗಾಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು.
ಮೊಬೈಲ್ ಬಳಕೆ ನಿಷೇಧಿಸಿರುವ ಬಗ್ಗೆ ಎಲ್ಲಾ ಸಫಾರಿ ವಾಹನಗಳಲ್ಲಿ ಮತ್ತು ಆರಂಭಿಕ ಸ್ಥಳದಲ್ಲಿ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಬೇಕು ಹಾಗೂ ಪ್ರವಾಸಿಗರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು.
ವೈರ್ಲೆಸ್ ಸಂಪರ್ಕ: ಪ್ರವಾಸಿಗರು ಮತ್ತು ಸಿಬ್ಬಂದಿಗಳ ಭದ್ರತೆಗಾಗಿ ಎಲ್ಲಾ ಸಫಾರಿ ವಾಹನಗಳಲ್ಲಿ ಮೊಬೈಲ್ ನಿಸ್ತಂತು ಸಂಪರ್ಕ ವ್ಯವಸ್ಥೆಯನ್ನು (Mobile Wireless Set) ಕಡ್ಡಾಯವಾಗಿ ಅಳವಡಿಸಿ ಕಾರ್ಯನಿರ್ವಹಿಸುವಂತೆ ಖಚಿತಪಡಿಸಿಕೊಳ್ಳಬೇಕು. ಮೊಬೈಲ್ ಬದಲಿಗೆ ನಿಯಮಾನುಸಾರ ಕ್ಯಾಮೆರಾಗಳನ್ನು ಬಳಸಬಹುದಾದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಟಿಕೆಟ್ ಬುಕಿಂಗ್ ತಂತ್ರಾಂಶದ ಮೂಲಕ ಸೂಕ್ತ ಸೂಚನೆ ನೀಡಬೇಕು.
ಒಟ್ಟಾರೆಯಾಗಿ, ವನ್ಯಜೀವಿಗಳ ಸಂರಕ್ಷಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಫಾರಿ ವೇಳೆ ಮೊಬೈಲ್ ಬಳಕೆ ನಿಷೇಧಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಇದರ ಕಟ್ಟುನಿಟ್ಟಿನ ಪಾಲನೆಯಿಂದ ಪ್ರಾಣಿಗಳಿಗೆ ಉಂಟಾಗುವ ತೊಂದರೆ ತಪ್ಪಲಿದ್ದು, ಪ್ರವಾಸಿಗರು ಪ್ರಕೃತಿಯನ್ನು ಕ್ಯಾಮೆರಾ ಮೂಲಕ ಆನಂದಿಸಲು ಹೊಸ ಮಾರ್ಗಸೂಚಿ ಸಹಕಾರಿಯಾಗಲಿದೆ.