ನವದೆಹಲಿ, ಅ.10 (DaijiworldNews/AA): ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವ ಮುನ್ನವೇ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಿಮಾನದಲ್ಲೇ ವಶಕ್ಕೆ ಪಡೆದಿದ್ದಾರೆ.

ಯೂಟ್ಯೂಬರ್ ಧ್ರುವ್ ರಾಠೀ ವಶಕ್ಕೆ ಪಡೆದ ಬೆನ್ನಲ್ಲೇ ಮುಂಬೈನಿಂದ ದೆಹಲಿಗೆ ಆಗಮಿಸಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ವಕ್ತಾರರಾದ ಅಶುತೋಷ್ ರಾಂಕಾ, ಸೌರವ್ ದಾಸ್ ಅವರನ್ನು ವಿಮಾನದ ಒಳಗಡೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
"ನಾವು ಎಲ್ಲದ್ದಕ್ಕೂ ಸಿದ್ದರಿದ್ದೇವೆ. ನಾವು ಯಾವುದಕ್ಕೂ ಹೆದರಲ್ಲ. ಅವರು ನನ್ನನ್ನು ಬಂಧಿಸಲಿ ಅಥವಾ ವಶಕ್ಕೆ ಪಡೆಯಲಿ. ಅದರಿಂದ ನನಗೇನೂ ವ್ಯತ್ಯಾಸವಾಗುವುದಿಲ್ಲ. ಯುಎಪಿಎ ಅಥವಾ ಎನ್ಎಸ್ಎ ಕಾಯ್ದೆಗಳನ್ನು ಹೇರಲಿ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗಾಗಿ ಮತ್ತು ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಇದನ್ನು ಖಂಡಿಸಿರುವ ಸಿಜೆಪಿ, 'ಇದು ದಬ್ಬಾಳಿಕೆಯ ಕ್ರಮ. ಪ್ರತಿಭಟನಾ ಸ್ಥಳ ತಲುಪುವ ಮುನ್ನವೇ ನಾಯಕರನ್ನು ತಡೆಯುವ ಮೂಲಕ ಶಾಂತಿಯುತ ಪ್ರತಿಭಟನೆಯ ನಾಯಕತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ. ಮೂವರನ್ನೂ ಯಾವುದೇ ಷರತ್ತಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದೆ.