ನವದೆಹಲಿ, ಅ.10 (DaijiworldNews/AA): ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

ತಡರಾತ್ರಿಯಿಂದಲೇ ಸುಮಾರು 50ಕ್ಕೂ ಹೆಚ್ಚು ಪೊಲೀಸರು ರಾಠಿ ತಂಗಿದ್ದ ಗುರುಗ್ರಾಮದ ನಿವಾಸದ ಹೊರಗೆ ಕಾವಲು ಕಾಯುತ್ತಿದ್ದರು. ಬೆಳಗ್ಗೆ 7:48ರ ಸುಮಾರಿಗೆ ಅವರನ್ನು ಅವರ ಮನೆಯಲ್ಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ವಶಕ್ಕೆ ಪಡೆಯುವ ಮುನ್ನವೇ ಧ್ರುವ್ ರಾಠಿ ಅವರ ವಿರುದ್ಧ ಕಾನೂನು ತನಿಖೆಗೆ ಒತ್ತಾಯಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ಧ್ರುವ್ ರಾಠಿ ಅವರ ಪೌರತ್ವ, ಇಮಿಗ್ರೇಷನ್ ಸ್ಥಿತಿ ಹಾಗೂ ವೀಸಾ ನಿಯಮಗಳ ಉಲ್ಲಂಘನೆ ಕುರಿತು ತಕ್ಷಣ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಧ್ರುವ್ ರಾಠಿ ಅವರು ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ಅವರು ಭಾರತಕ್ಕೆ ಪ್ರವೇಶಿಸಲು ಬಳಸಿದ ಪಾಸ್ಪೋರ್ಟ್ ಮತ್ತು ಅವರ ಪ್ರಸ್ತುತ ರಾಷ್ಟ್ರೀಯತೆಯ ವಾಸ್ತವ ಸ್ಥಿತಿಯನ್ನು ಸ್ಪಷ್ಟಪಡಿಸಬೇಕು. ಅವರು ಯಾವ ವರ್ಗದ ವೀಸಾ ಅಥವಾ ಓಸಿಐ ಕಾರ್ಡ್ ಅಡಿಯಲ್ಲಿ ಭಾರತಕ್ಕೆ ಬಂದಿದ್ದಾರೆ ಮತ್ತು ಪ್ರವೇಶದ ವೇಳೆ ಘೋಷಿಸಿದ ಭೇಟಿಯ ಅಧಿಕೃತ ಉದ್ದೇಶವೇನು ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.
ವಿದೇಶಿ ಪ್ರಜೆಯೊಬ್ಬರು ಭಾರತದ ಸಾಂವಿಧಾನಿಕ ಹಾಗೂ ಶಾಸನಬದ್ಧ ಸಂಸ್ಥೆಗಳ ವಿರುದ್ಧ ನಡೆಯುವ ರಾಜಕೀಯ ಸಭೆ-ಪ್ರತಿಭಟನೆಗಳಲ್ಲಿ ಕಾನೂನುಬದ್ಧವಾಗಿ ಭಾಗವಹಿಸಿ ಭಾಷಣ ಮಾಡಲು ಅವಕಾಶವಿದೆಯೇ? ಇದಕ್ಕೆ ಪೂರ್ವಾನುಮತಿ ಪಡೆಯಲಾಗಿದೆಯೇ? ಧ್ರುವ್ ರಾಠಿ ಅವರು 'ವಿದೇಶಿಯರ ಕಾಯ್ದೆ 1946, ವೀಸಾ ಷರತ್ತುಗಳು, ಇಮಿಗ್ರೇಷನ್ ನಿಯಮಗಳು ಅಥವಾ ಒಸಿಐ ಷರತ್ತುಗಳನ್ನು ಉಲ್ಲಂಘಿಸಿದ್ದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.