ಶಿಮ್ಲಾ, ಅ.10 (DaijiworldNews/AK): ಆಕಾಶ ಎತ್ತರದಲ್ಲಿ ವಿಮಾನದ ಏರ್ಹೋಸ್ಟೆಸ್ ಆಗಿ ಹಾರಾಡಬೇಕಿದ್ದ ಯುವತಿಯೊಬ್ಬಳು, ಇಂದು 12 ಟನ್ ತೂಕದ ಬೃಹತ್ ವಾಣಿಜ್ಯ ಟ್ರಕ್ನ ಸ್ಟೀರಿಂಗ್ ಹಿಡಿದು ದೇಶಾದ್ಯಂತ ಹೆದ್ದಾರಿಗಳಲ್ಲಿ ಅಬ್ಬರಿಸುತ್ತಿದ್ದಾಳೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಗಾಟ್ ತಾಲೂಕಿನ ಖುಡ್ಲಾ ಗ್ರಾಮದ 25 ವರ್ಷದ ನೇಹಾ ಠಾಕೂರ್ ಎಂಬ ಯುವತಿ, ತಮ್ಮ ವೃತ್ತಿ ಬದುಕಿನ ಹಾದಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡು ದೇಶದ ಮೊದಲ ಮಹಿಳಾ ಟ್ರಕ್ ಡ್ರೈವರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.
ನೇಹಾ ಅವರ ತಂದೆ ಮನೋಜ್ ಠಾಕೂರ್ ಕಳೆದ ಎರಡು ದಶಕಗಳಿಂದ ಸಾರಿಗೆ (ಟ್ರಾನ್ಸ್ಪೋರ್ಟ್) ಉದ್ಯಮದಲ್ಲಿದ್ದಾರೆ. ಚಿಕ್ಕಂದಿನಿಂದಲೇ ತಂದೆಯ ಜೊತೆ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದ ನೇಹಾ ಅವರಿಗೆ ಈ ಬೃಹತ್ ವಾಹನಗಳ ಮೇಲೆ ವಿಶೇಷ ಪ್ರೀತಿ ಬೆಳೆದಿತ್ತು. ಶಾಲೆಯ ದಿನಗಳಲ್ಲಿ ತಂದೆ ತಮ್ಮ ಟ್ರಕ್ನಲ್ಲೇ ನೇಹಾ ಅವರನ್ನು ಶಾಲೆಗೆ ಬಿಡುತ್ತಿದ್ದುದ್ದು ಅವರ ನೆನಪಿನಲ್ಲಿ ಇಂದಿಗೂ ಹಸಿರಾಗಿದೆ.
ಪದವಿ ಮುಗಿಸಿದ ನಂತರ ನೇಹಾ ಏರ್ಹೋಸ್ಟೆಸ್ ಆಗುವ ಕನಸಿನೊಂದಿಗೆ ಚಂಡೀಗಢಕ್ಕೆ ತೆರಳಿ ತರಬೇತಿ ಪಡೆಯಲಾರಂಭಿಸಿದ್ದರು. ಆದರೆ, ಅದೇ ವೇಳೆಗೆ ಅಪ್ಪಳಿಸಿದ ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ವಿಮಾನಯಾನ ಕ್ಷೇತ್ರಕ್ಕೆ ತೀವ್ರ ಹೊಡೆತ ಬಿತ್ತು. ಇದರಿಂದಾಗಿ ತರಬೇತಿ ಅರ್ಧಕ್ಕೆ ನಿಂತಾಗ ನೇಹಾ ತಮ್ಮ ಸ್ವಗ್ರಾಮಕ್ಕೆ ಮರಳಿದರು.
ತಂದೆಯ ಬೆಂಬಲದೊಂದಿಗೆ ಡ್ರೈವಿಂಗ್ ಶಾಲೆಗೆ ಸೇರಿದ ನೇಹಾ, ಹೆವಿ ಮೋಟರ್ ವೆಹಿಕಲ್ ಚಾಲನಾ ಪರವಾನಗಿ (ಲೈಸೆನ್ಸ್) ಪಡೆದರು. ಕೇವಲ 21ನೇ ವಯಸ್ಸಿನಲ್ಲಿ (2023 ರಲ್ಲಿ) ಬೃಹತ್ ಟ್ರಕ್ ಓಡಿಸುವುದನ್ನು ಕರಗತ ಮಾಡಿಕೊಂಡರು. ಒಬ್ಬ ಯುವತಿ ಟ್ರಕ್ ಡ್ರೈವರ್ ಆಗುವುದನ್ನು ಸಮಾಜ ಮತ್ತು ಸುತ್ತಮುತ್ತಲಿನ ಜನರು ಸಂಶಯ ಹಾಗೂ ಟೀಕೆಯಿಂದ ನೋಡಿದರೂ, ತಂದೆ ಮನೋಜ್ ಠಾಕೂರ್ ಮಗಳ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು
ಆರಂಭದಲ್ಲಿ ಸ್ಥಳೀಯ ರಸ್ತೆಗಳಲ್ಲಿ ಟ್ರಕ್ ಚಲಾಯಿಸುತ್ತಿದ್ದ ನೇಹಾ, ಈಗ 12 ಟನ್ ತೂಕದ ಟಾಟಾ ಬೃಹತ್ ಟ್ರಕ್ ನಲ್ಲಿ ನಿರ್ಮಾಣ ಸಾಮಗ್ರಿಗಳು ಹಾಗೂ ಕೃಷಿ ಉತ್ಪನ್ನಗಳನ್ನು ಹೊತ್ತು ರಾಜ್ಯದಿಂದ ರಾಜ್ಯಕ್ಕೆ ನೂರಾರು ಕಿಲೋಮೀಟರ್ ಪ್ರಯಾಣಿಸುತ್ತಾರೆ. ಕಡಿದಾದ ಬೆಟ್ಟಗುಡ್ಡಗಳ ರಸ್ತೆಗಳು, ಮಂಜು, ಮಳೆ ಹಾಗೂ ಸತತ ಗಂಟೆಗಳ ಕಾಲ ಏಕಾಗ್ರತೆಯಿಂದ ಚಾಲನೆ ಮಾಡುವುದು ಸುಲಭದ ಮಾತಲ್ಲ. ಆದರೂ ನೇಹಾ ಇದನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.
ಸಾಂಪ್ರದಾಯಿಕವಾಗಿ ಹೆಣ್ಣುಮಕ್ಕಳಿಗೆ ಸೂಕ್ತವಲ್ಲ ಎಂದು ಸಮಾಜ ಭಾವಿಸುವ ಕ್ಷೇತ್ರಕ್ಕೆ ಯಾವುದೇ ಯುವತಿ ಹೋಗಲು ಬಯಸಿದರೆ, ಜನರು ಏನು ಅನ್ನುತ್ತಾರೋ ಎಂಬ ಒಂದೇ ಕಾರಣಕ್ಕೆ ತನ್ನನ್ನು ತಾನು ತಡೆದುಕೊಳ್ಳಬಾರದು. ನನ್ನ ಪಯಣದಲ್ಲೂ ಸವಾಲುಗಳಿದ್ದವು, ಆದರೆ ನಾನು ನನ್ನ ಮೇಲೆ ನಂಬಿಕೆ ಇಟ್ಟು ಮುನ್ನಡೆದೆ. ನಿಮಗೆ ಯಾವುದೇ ಕೆಲಸದಲ್ಲಿ ಆಸಕ್ತಿ ಇದ್ದರೆ, ಆತ್ಮವಿಶ್ವಾಸದಿಂದ ಅದನ್ನು ಮಾಡಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ ಎಂದು ದೇಶದ ಯುವತಿಯರಿಗೆ ನೇಹಾ ಕರೆ ನೀಡಿದ್ದಾರೆ.