ವಿಜಯಪುರ, ಅ.09 (DaijiworldNews/AK):ತೀವ್ರ ಬರದಿಂದ ತತ್ತರಿಸಿರುವ ರಾಜ್ಯದ ರೈತರ ನೆರವಿಗೆ ಬಾರದ ಸರ್ಕಾರ ಕೇವಲ ರಿಯಲ್ ಎಸ್ಟೇಟ್, ಟೌನ್ಶಿಪ್ ಮಾಡುವುದರಲ್ಲೇ ಮುಳುಗಿದೆ. ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗಿದೆ. ಅನ್ನದಾತರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುಕಾಲು ವರ್ಷವಾಗಿದೆ. ಆದರೆ ಅವರು ಹೇಳಿಕೊಳ್ಳುವಂತೆ ನುಡಿದಂತೆ ನಡೆಯದೆ ಕೇವಲ ಜಾಹೀರಾತು ನೀಡಿ ಪ್ರಚಾರದಲ್ಲಿ ತೊಡಗಿದೆ. ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಲಿಲ್ಲ. ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲಿಲ್ಲ. ಎರಡೂವರೆ ಲಕ್ಷ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಲಿಲ್ಲ. ಉದ್ಯೋಗಾವಕಾಶ ಸಿಗದೆ ಯುವ ಜನತೆ ಧಂಗೆ ಏಳುವ ಸ್ಥಿತಿಗೆ ಬಂದಿದ್ದಾರೆ ಎಂದು ದೂರಿದರು.
ರೈತ ವಿರೋಧಿ ನೀತಿಗಳಿಂದ ಸಂಕಷ್ಟ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಪೀಡಿತ ರೈತರಿಗೆ ಪ್ರತಿ ಹೆಕ್ಟೇರ್ಗೆ 50 ಸಾವಿರ ಪರಿಹಾರ, 5 ಲಕ್ಷದವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಹೈನುಗಾರಿಕೆಗೆ ಫೊತ್ಸಾಹ ನೀಡಬೇಕು ಎಂದು ವಿಶೇಷ ಅಧಿವೇಶನದಲ್ಲಿ ಆಗ್ರಹ ಮಾಡಿದ್ದೇವು. ಆದರೆ ಸರ್ಕಾರ ಕೇವಲ ಎರಡೂವರೆ ಸಾವಿರ ಕೊಡುವ ಘೋಷಣೆ ಮಾಡಿಕೊಂಡು ಸುಮ್ಮನೆ ಕುಳಿತಿದೆ ಎಂದರು.
ಪ್ರತಿ ದಿನ ತ್ರಿ ಫೇಸ್ ಎಂಟು ಗಂಟೆ ವಿದ್ಯುತ್ ರೈತರಿಗೆ ಬೇಕಾಗಿದೆ. ಅದನ್ನೂ ಸರ್ಕಾರ ಕೊಡಲಿಲ್ಲ. ಸರ್ಕಾರದ ಇಂತಹ ಧೋರಣೆಯಿಂದ ಜನರು ಬೇಸತ್ತು. ಆತ್ಮಸ್ಥೈರ್ಯ ಕಳೆದುಕೊಂಡ ರೈತ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದು ತಿಳಿಸಿದರು.
ಟೌನ್ಶಿಪ್, ರಿಯಲ್ ಎಸ್ಟೇಟ್ ಕಡೆಗೆ ಮಾತ್ರ ಕಾಳಜಿ
ಮುಖ್ಯಮಂತ್ರಿಗಳಿಗೆ ಟೌನ್ಶಿಪ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕಡೆಗೆ ಮಾತ್ರವೇ ಆಸಕ್ತಿ. ರೈತರ ಬಗ್ಗೆ ಕಿಂಚಿತೂ ಕಾಳಜಿ ಇಲ್ಲದಿರಿವುದು ದುರ್ದೈವ. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿಕೊಂಡರೆ ಸಾಲದು. ಜನರ ಬಗ್ಗೆ ಕಾಳಜಿಯೂ ಇರಬೇಕು ಎಂದು ಒತ್ತಾಯಿಸಿದರು.