ಚಂಡೀಗಢ ಅ.09 (DaijiworldNews/AK): ಸತತ 4 ಸೋಲುಗಳ ಬಳಿಕ ಕೊನೆಗೆ 5ನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಇಂದು ಐಪಿಎಸ್ ಅಧಿಕಾರಿಯಾಗಿ ಮೋಹಿತಾ ಶರ್ಮಾ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಟಿವಿ ಶೋ ಮೂಲಕ ಕೋಟ್ಯಾಧಿಪತಿ ಆಗಿರುವ ಇವರ ಸಕ್ಸಸ್ ಸ್ಟೋರಿ ಇಲ್ಲಿದೆ.

ಸದ್ಯ ಜಮ್ಮು ಮತ್ತು ಕಾಶ್ಮೀರ ಕೇಡರ್ ನಲ್ಲಿ ನೇಮಕಗೊಂಡಿರುವ ಐಪಿಎಸ್ ಮೋಹಿತಾ ಶರ್ಮಾ ಮೂಲತಃ ಹಿಮಾಚಲ ಪ್ರದೇಶದವರು. ಇವರ ತಂದೆಯ ಕೆಲಸದ ಕಾರಣದಿಂದ ಅವರ ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತು. ಇದರಿಂದಾಗಿ ಮೋಹಿತಾ ಅವರ ಶಿಕ್ಷಣವು ದೆಹಲಿಯಲ್ಲೇ ಪೂರ್ಣಗೊಂಡಿತು.
ಮೋಹಿತಾ ಶರ್ಮಾ ಅವರ ತಂದೆ-ತಾಯಿಗೆ ಒಬ್ಬಳೇ ಮಗಳು. ಅದಕ್ಕಾಗಿಯೇ ಯಾವಾಗಲೂ ತನ್ನ ಹೆತ್ತವರು ಹೆಮ್ಮೆಪಡುವಂತಹದನ್ನು ಮಾಡಬೇಕು ಎಂದು ಮೋಹಿತಾ ಬಯಸುತ್ತಿದ್ದರು. ಮೋಹಿತಾ ಶರ್ಮಾ ಅವರ ತಂದೆ ಮಾರುತಿ ಉದ್ಯೋಗ್ ಲಿಮಿಟೆಡ್ ನಿಂದ ನಿವೃತ್ತರಾಗಿದ್ದರೆ, ತಾಯಿ ಗೃಹಿಣಿ. ಮೋಹಿತಾ ತನ್ನ ಶಾಲಾ ಶಿಕ್ಷಣವನ್ನು ದ್ವಾರಕಾದ ಡಿಪಿಎಸ್ ನಲ್ಲಿ ಪೂರೈಸಿದ್ದಾರೆ. 10ನೇ ತರಗತಿಯಲ್ಲಿ 92.20% ಮತ್ತು ಸೆಕೆಂಡ್ ಪಿಯುನಲ್ಲಿ 90.70% ಅಂಕಗಳನ್ನು ಗಳಿಸಿದ್ದರು.
ಇದಾದ ನಂತರ ಭಾರತಿ ವಿದ್ಯಾಪೀಠ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ನಲ್ಲಿ ಬಿ.ಟೆಕ್ ಓದಿದ್ದಾರೆ. 2012ರಲ್ಲಿ ಪದವಿ ಪಡೆದ ನಂತರ ಅವರು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. UPSC ಪರೀಕ್ಷೆಯ 5ನೇ ಪ್ರಯತ್ನದಲ್ಲಿ ಮೋಹಿತಾ ಶರ್ಮಾ ಯಶಸ್ವಿಯಾಗಿದ್ದಾರೆ.
ಮೊದಲ 4 ಪ್ರಯತ್ನಗಳಲ್ಲಿ ಸೋಲನ್ನು ಕಂಡ ನಂತರ 5ನೇ ಸಲ 262ನೇ ರ್ಯಾಂಕ್ ಪಡೆದರು. ಭೂಗೋಳ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ಅಂತರ್ಜಾಲದ ಸಹಾಯದ ಮೂಲಕ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಭಾನುವಾರದಂದು 4-5 ಗಂಟೆಗಳ ಕಾಲ ಇಂಟರ್ನೆಟ್ ನಲ್ಲೇ ಕಳೆಯುತ್ತಿದ್ದರಂತೆ.
ಐಪಿಎಸ್ ಮೋಹಿತಾ ಶರ್ಮಾ 2019 ರಲ್ಲಿ ಐಎಫ್ ಎಸ್ ಅಧಿಕಾರಿ ರುಶಾಲ್ ಗಾರ್ಗ್ ಅವರನ್ನು ವಿವಾಹವಾದರು. ರುಶಾಲ್ ಅವರು ಚಂಡೀಗಢದ ಮೊಹಾಲಿ ನಿವಾಸಿ. ಅವರು UPSC ಪರೀಕ್ಷೆಯಲ್ಲಿ 58 ನೇ ರ್ಯಾಂಕ್ ಗಳಿಸಿದ್ದಾರೆ. ಮೋಹಿತಾ ಶರ್ಮಾ Instagram ನಲ್ಲಿ ತುಂಬಾನೇ ಫೇಮಸ್. ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ಕೂಡ ಇವರನ್ನು ಫಾಲೋ ಮಾಡ್ತಾರೆ. ಅದಕ್ಕೆ ಕಾರಣ ಕೂಡ ಇದೆ.
IPS ಮೋಹಿತಾ ಶರ್ಮಾ ಅವರು 2020 ರಲ್ಲಿ 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 12 ರಲ್ಲಿ ಭಾಗವಹಿಸಿದ್ದರು. ಇವರ ಪತಿ 20 ವರ್ಷಗಳಿಂದ ಕೆಬಿಸಿಗೆ ಹೋಗಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಿರಲಿಲ್ಲ. ನಂತರ ಪತಿಯ ಆಸೆಯಂತೆ ಮೋಹಿತಾ KBC 12ಕ್ಕೆ ನೋಂದಾಯಿಸಿಕೊಂಡರು. ಅಮಿತಾಬ್ ಬಚ್ಚನ್ ಅವರ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಐಪಿಎಸ್ ಮೋಹಿತಾ ಶರ್ಮಾ ಅವರು 1 ಕೋಟಿ ರೂ. ಗೆದ್ದರು.